ಶ್ರೀರಂಗಪಟ್ಟಣ: ಪಟ್ಟಣದ ಹಳೆಯ ಲಾರ್ಡ್ ವೆಲ್ಲೆಸ್ಲೀ ಸೇತುವೆ ಬಳಿ ಮಂಗಳವಾರ ಸಂಜೆ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೈಸೂರು ನಗರದ ಅಶೋಕಪುರಂ ಬಡಾವಣೆ ನಿವಾಸಿ ದಿ.ಯಾಲಂಕಯ್ಯ ಅವರ ಪುತ್ರ ವೈ.ರೇವಣ್ಣ (53) ಮೃತರು.
ಕ್ಯಾಬ್ ಡ್ರೈವರ್ ಆಗಿದ್ದ ಈತ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ಕುಟುಂಬಸ್ಥರಿಂದ 500 ರೂ. ಪಡೆದು ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ಬಸ್ಸಿನಲ್ಲಿ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದು, ನಂತರ ವೆಲ್ಲೆಸ್ಲಿ ಬ್ರಿಡ್ಜ್ ಬಳಿ ತಡೆಗೋಡೆ ಮೇಲೆ ಕುಳಿತಿದ್ದಾನೆ. ಕೆಲ ಹೊತ್ತಿನ ಬಳಿಕ ಕುಳಿತ ಸ್ಥಳದಿಂದ ಏಕಾಏಕಿ ನದಿಗೆ ಉರುಳಿ ಬಿದ್ದ. ಇದನ್ನು ಗಮನಿಸಿದ ಜನರು ತಕ್ಷಣ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಪೊಲೀಸರೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಕೈಗೊಳ್ಳುವಷ್ಟರಲ್ಲಿ ವೆಲ್ಲೆಸ್ಲಿ ಸೇತುವೆಯ ಇಕ್ಕೆಲದ ಬಳಿ ಇದ್ದ ಶವ ಏಕಾಏಕಿ ನೀರಿನ ರಭಸಕ್ಕೆ 2.5 ಕಿ.ಮೀ. ದೂರದ ಗಂಜಾಂನ ನಿಮಿಷಾಂಬ ದೇಗುಲದ ಸಮೀಪದವರೆಗೂ ತೇಲಿಹೋಗಿದೆ.
ನಿಮಿಷಾಂಬ ಸ್ನಾನಘಟ್ಟದ ಬಳಿ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಎನ್.ಉಪ್ಪಾರ್ ನೇತೃತ್ವದಲ್ಲಿ ಇಲಾಖೆಯ ತಜ್ಞ ಈಜುಗಾರ ಸಿಬ್ಬಂದಿ ಅನಂತ, ಪರಮೇಶ್, ಸಿದ್ದಪ್ಪ, ಬಸವರಾಜು, ಶಿವಾನಂದ್ ಆವಾಜಿ ನದಿಗಿಳಿದು ಶವವನ್ನು ದಡಕ್ಕೆ ಎಳೆದು ತಂದಿದ್ದಾರೆ.
ಮೃತ ಧರಿಸಿದ್ದ ಪ್ಯಾಂಟ್ ಜೇಬಿನಲ್ಲಿ ವಾಹನ ಚಾಲನ ಲೈಸನ್ಸ್ ಹಾಗೂ ಆಧಾರ್ ಕಾರ್ಡ್ ದೊರೆತಿದೆ. ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಮೃತನ ಕುಟುಂಬಸ್ಥರಿಗೆ ವಿಷಯ ತಿಳಿಸಿದರು. ಶವವನ್ನು ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.