ವಿಜಯವಾಣಿ ಸುದ್ದಿಜಾಲ ಕಾರವಾರ
ಸ್ವಚ್ಛತೆ ಇದ್ದರೆ ಎಲ್ಲರೂ ಸುಖಿ, ನಿರೋಗಿಯಾಗಿರಲು ಸಾಧ್ಯ ಎಂದು ರಾಜ್ಯಪಾಲ ಥಾವರಚಂದ ಗೆಹಲೋತ್ ಹೇಳಿದರು.
ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋದಲ್ಲಿ ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ಆಯೋಜಿಸಿದ ಅಂತಾರಾಷ್ಟ್ರೀಯ ಕಡಲ ತೀರ ಸ್ವಚ್ಛತಾ ದಿನ ಕಾರ್ಯಕ್ರಮ ಉದ್ಘಾಟಿಸಿ, ಸಮುದ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಸ್ವಚ್ಛತೆ ಎಲ್ಲರ ಕರ್ತವ್ಯವಾಗಿದೆ. ಅಲ್ಲದೆ, ಸ್ವಚ್ಛತೆಯಿಂದ ಆರ್ಥಿಕ, ಸಾಮಾಜಿಕ ಲಾಭವೂ ಉಂಟಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಅಭಿಯಾನ ಪ್ರಾರಂಭಿಸಿದ ನಂತರ ದೇಶದಲ್ಲಿ ಈ ಬಗ್ಗೆ ಅರಿವು ಹೆಚ್ಚಿದೆ.
ರೋಗಗಳೂ ಕಡಿಮೆಯಾಗುತ್ತಿವೆ.
ಹಾಗಾಗಿ ಸ್ವಚ್ಛ ಭಾರತ, ಸ್ವಸ್ಥ ಭಾರತ ಮಾಡಲು ಎಲ್ಲರ ಸಹಕಾರ ಬೇಕಿದೆ ಎಂದರು.
ನದಿ, ನಾಲೆಗಳ ನೀರು, ಕಾರ್ಖಾನೆಗಳ ಹೊಸಲು ಸಮುದ್ರ ಸೇರುತ್ತವೆ. ಇದರಿಂದ ಸಾಗರ ಕಲುಶಿತವಾಗಿ, ಜಲಚರಗಳಿಗೆ ತೊಂದರೆ ಉಂಟಾಗುತ್ತಿದೆ. ನದಿ,ನಾಲೆಗಳನ್ನು ಸ್ವಚ್ಛ ಮಾಡಿ. ಅವುಗಳಿಗೆ ಹೊಲಸು ಸೇರುವುದನ್ನು ತಪ್ಪಿಸಿ, ಸಮುದ್ರ ಸುರಕ್ಷಿತವಾಗಿರಲಿದೆ ಎಂದು ಸೂಚನೆ ನೀಡಿದರು.
ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ, ಸೀಬರ್ಡ್ ನೌಕಾ ಯೋಜನೆ ವಿಸ್ತಾರವಾಗುತ್ತಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಕಾರವಾರ ನಗರ ಅಭಿವೃದ್ಧಿಗೆ ಸೀಬರ್ಡ್ ಯೋಜನೆ ನೆರವಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಉತ್ತರ ಕನ್ನಡವನ್ನು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದರು.
ಪರ್ಯಾವರಣ ಸಂರಕ್ಷಣ ಗತಿವಿಧಿ ಸಂಘಟನೆಯ ಜಯರಾಮ ಬೊಳ್ಳಾಜೆ ಮಾತನಾಡಿ, ಎಲ್ಲರ ಮನೆಯೂ ಹಸಿರು ಮನೆಯಾಗಬೇಕು ಇಲ್ಲದಿದ್ದಲ್ಲಿ ಸಮುದ್ರದಲ್ಲಿ ಮೀನುಗಳ ಬದಲು ಪ್ಲಾಸ್ಟಿಕ್ ರಾಶಿ ಸಿಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಸಿದರು.
ಭಾರತ ಸರ್ಕಾರದ ಮರೈನ್ ಲೈವಿಂಗ್ ರಿಸೋರ್ಸ್ ಆಂಡ್ ಇಕಾಲಜಿಯ ನಿರ್ದೇಶಕ ಡಾ.ಜಿ.ವಿ.ಎಂ.ಗುಪ್ತಾ, ಎಸ್ ಪಿ ಡಾ.ಸುಮನ್ ಪೆನ್ನೇಕರ್, ಡಿಎಫ್ ಒ ಡಾ.ಪ್ರಶಾಂತಕುಮಾರ್ ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ವಾಗತಿಸಿದರು. ಜಿಪಂ ಸಿಇಒ ಪ್ರಿಯಾಂಗಾ ಎಂ. ವಂದಿಸಿದರು. ಜಿಲ್ಲಾ ಯುವ ಸಮನ್ವಯ ಅಧಿಕಾರಿ ಯಶ್ವಂತ ಯಾದವ್, ಬಂದರು ಸಂರಕ್ಷಣಾಧಿಕಾರಿ ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.