ಮೂಗೂರು: ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ 2ನೇ ದಿನದ ಜಾತ್ರಾ ಕಾರ್ಯಕ್ರಮದ ಪ್ರಯುಕ್ತ ಹೂವಿನ ಪಲ್ಲಕ್ಕಿ ಉತ್ಸವ ಮಂಗಳವಾರ ರಾತ್ರಿ ಮೂಗೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು.
ರಾತ್ರಿ 8ರ ಸಮಯದಲ್ಲಿ ತೆಪ್ಪೋತ್ಸವ ಅಂಗವಾಗಿ ಶ್ರೀ ತ್ರಿಪುರ ಸುಂದರಿ ಅಮ್ಮನವರ ಉತ್ಸವಮೂರ್ತಿಯನ್ನು ಆಭರಣಗಳಿಂದ ಶೃಂಗಾರಗೊಳಿಸಿ ವಿವಿಧ ಬಗೆಯ ಹೂಗಳಿಂದ ಅಲಂಕೃತವಾದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ನಂತರ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ದಾರಿಯುದ್ದಕ್ಕೂ ಭಕ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ನೂತನ ಕಲ್ಯಾಣಿ ಬಳಿ ಅಮ್ಮ ನವರಿಗೆ ಪೂಜೆ ಸಲ್ಲಿಸಲಾಯಿತು.
ಗ್ರಾಮದಲ್ಲಿ ನೂತನ ಕಲ್ಯಾಣಿ ನಿರ್ಮಿಸಿ 3 ವರ್ಷಗಳು ಕಳೆದಿದ್ದರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಟ್ಟಿರುವ ಕಾರಣ, ಅಪಾಯ ಸಂಭವಿಸಬಹುದು ಎನ್ನುವ ಕಾರಣಕ್ಕಾಗಿ ಈ ಬಾರಿಯೂ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿಲ್ಲ. ಹೀಗಾಗಿ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಭಕ್ತರಲ್ಲಿ ಮತ್ತೆ ನಿರಾಸೆ ತಂದಿತು.