ಹಾಸನ: ಸಮಾಜಮುಖಿ ನಡಿಗೆ ತಂಡದ 16ನೇ ನಡಿಗೆಯನ್ನು ಈ ಬಾರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹಮ್ಮಿಕೊಂಡಿದ್ದು, ಅದರ ಪ್ರಯುಕ್ತ ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನಡಿಗೆ ತಂಡದ ಸದಸ್ಯರು ನಗರದ ಶ್ರೀ ಗಂಧದ ಕೊಠಿ, ಆರ್.ಸಿ. ರಸ್ತೆ ಮೂಲಕ ಜಾಥ ನಡೆಸಿದರು.
ನಗರದ ಖಾಸಗಿ ಹೋಟೆಲೊಂದರಲ್ಲಿ ಸಮಾಜಮುಖಿ ಬಳಗದ ಡಾ.ರಂಗಲಕ್ಷ್ಮೀ ಅವರು ಎಲ್ಲರನ್ನು ಸ್ವಾಗತಿಸಿ, ಉಪಾಹಾರ ವ್ಯವಸ್ಥೆ ಮಾಡಿ ಪ್ರಯಾಣಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಅವರು ನವೆಂಬರ್ ತಿಂಗಳ ಸಮಾಜಮುಖಿ ಸಂಚಿಕೆ ಬಿಡುಗಡೆ ಮಾಡಿದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶಶಿಧರ್, ಸಮಾಜಮುಖಿಯಿಂದ ಮೂರು ತಿಂಗಳಿಗೊಮ್ಮೆ ಸಮಾಜಮುಖಿ ನಡಿಗೆ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದು 16ನೇ ನಡಿಗೆ ಆಗಿದೆ. ‘ನಡೆದು ನೋಡು ಕರ್ನಾಟಕ’ ಎನ್ನುವ ವಿಶೇಷ ಕಾರ್ಯಕ್ರಮ ಇದಾಗಿದೆ. ಗೆಳೆಯರ ಬಳಗವೆಲ್ಲಾ ಒಂದು ಕಡೆ ಸೇರಿ ಮೂರು ದಿನಗಳ ಕಾಲ ಒಂದು ಜಿಲ್ಲೆಯ ಇಲ್ಲವೇ ಒಂದು ತಾಲೂಕಿನ ತುಂಬಾ ಮುಖ್ಯವಾದ ಪ್ರದೇಶದಲ್ಲಿ ನಡೆದು ಅಲ್ಲಿಯ ಸಂಸ್ಕೃತಿ, ಆಟ, ಊಟ, ತಿಂಡಿ, ಭಾಷೆ, ಬದುಕು ಸೇರಿದಂತೆ ಕೃಷಿ, ಕರಕುಶಲತೆ, ಇತಿಹಾಸದ ವಿಚಾರಗಳನ್ನು ತಿಳಿಯಲು ಖುದ್ಧಾಗಿ ಭೇಟಿ ಮಾಡಿ ಜನರ ಜತೆ ಬೆರೆತು ಒಂದಷ್ಟು ವಿಚಾರವನ್ನು ನಾವು ತಿಳಿದುಕೊಳ್ಳಲು ಈ ನಡಿಗೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಂಡದ ನಾಗರಾಜು ಅವರು ಮಾತನಾಡಿ ಇಂದಿನಿಂದ ಮೂರು ದಿನಗಳ ಕಾಲ ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ನಮ್ಮ ನಡಿಗೆ ಸಂಚರಿಸಲಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 75 ಜನರು ಹಾಸನಕ್ಕೆ ಬಂದಿದ್ದಾರೆ. ಇಲ್ಲಿಂದ ನಮ್ಮ ಪ್ರಯಾಣ ಶುರುವಾಗಲಿದೆ ಎಂದು ಮಾಹಿತಿ ನೀಡಿದರು.
ಜಾಥದಲ್ಲಿ ಸಮಾಜಮುಖಿ ತಂಡದ ಮುಖ್ಯಸ್ಥ ಜಯರಾಂ ರಾಯಪುರ, ನಡಿಗೆ ತಂಡದ ಸಂಚಾಲಕಿ ಶುಬಾ ಅರಸ್, ಹಿರಿಯ ಸದಸ್ಯರಾದ ಕೆ.ಪಿ. ರಮೇಶ, ಗಿರೀಜಾ ಚಂದ್ರಶೇಖರ್, ಚಂದ್ರಶೇಖರ್, ಮಂಜುಳಾ ಸುಬ್ಬಣ್ಣ, ರಮೇಶ್ ಗಬ್ಬೂರ್, ಮಂಜುನಾಥ, ಮರುಳು ಸಿದ್ದಪ್ಪ, ಕೆ.ಟಿ.ಜಯಶ್ರೀ, ಡಾ.ಅರವಿಂದ ಪಾಟೀಲ್, ರಾಜಲಕ್ಷ್ಮೀ, ಗಿರಿಜಾ, ವಿಜಯಲಕ್ಷ್ಮೀ ಇತರರು ಪಾಲ್ಗೊಂಡಿದ್ದಾರೆ.