ಜಿಲ್ಲೆ

ನಟೋರಿಯಸ್ ರೌಡಿ ಚೈಲ್ಡ್ ರವಿ ಬರ್ಬರ ಹತ್ಯೆ

ಹಾಸನ: ಹಾಸನ ನಗರದಲ್ಲಿ ಮತ್ತೆ ಲಾಂಗು - ಮಚ್ಚುಗಳ ಝಳಪಿಸಿದ್ದು ಬುಧವಾರ ಬೆಳಗ್ಗೆ ರೌಡಿಶೀಟರ್ ರವಿ ಅಲಿಯಾಸ್ ಚೈಲ್ಡ್ ರವಿಯನ್ನು (45) ದುಷ್ಕರ್ಮಿಗಳು ಶಾಲಾ ಮಕ್ಕಳು, ಸಾರ್ವಜನಿಕರ ಎದುರೆ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಗರದ ಹೇಮಾವತಿನಗರದಲ್ಲಿ ಬುಧವಾರ ಬೆಳಗ್ಗೆ ಕುಡಿಯಲು ನೀರು ತರಲೆಂದು ರವಿ ಬೈಕಿನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಕೊಲೆಗಡುಕರು ರವಿ ಹೋಗುತ್ತಿದ್ದ ಬೈಕಿಗೆ ಗುದ್ದಿಸಿದ್ದಾರೆ. ನೆಲಕ್ಕೆ ಬಿದ್ದ ರವಿ ಮೇಲೆ ತಕ್ಷಣ ಎರಗಿದ ನಾಲ್ಕೈದು ಜನರು ಮಾರಕಾಸತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ರವಿಗೆ ಪತ್ನಿ ಹಾಗೂ ಓರ್ವ ಮಗನಿದ್ದಾನೆ. ಇದಕ್ಕೂ ಮುನ್ನ ರವಿ ಈ ಹಿಂದೆ ಮತ್ತೊಬ್ಬರನ್ನು ಮದುವೆಯಾಗಿದ್ದು ಆಕೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದು ಅವರಿಗೆ ಒಬ್ಬ ಮಗನಿದ್ದಾನೆ ಎಂದು ಹೇಳಲಾಗುತ್ತಿದೆ.
ನಟೋರಿಯಸ್ ರೌಡಿ ಚೈಲ್ಡ್ ರವಿಯನ್ನು ನಡುರಸ್ತೆಯಲ್ಲಿ ಕೊಲೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿದೆ. ಬೆಳಗ್ಗೆ ಹೇಮಾವತಿ ನಗರದ ನಿವಾಸಿಗಳು ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದರು ಮತ್ತು ಇನ್ನು ಕೆಲ ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು ಹೋಗುತ್ತಿದ್ದರು. ಜನರು ತಿರುಗಾಡುತ್ತಿದ್ದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕೊಲೆಯಾದ ರವಿಯ ವಿರುದ್ಧ ಅತ್ಯಾಚಾರ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿದ್ದವು. ಸಾಕಷ್ಟು ಬಾರಿ ಜೈಲುವಾಸ ಅನುಭವಿಸಿದ್ದ. ಅಲ್ಲದೆ ಗೂಂಡ ಕಾಯ್ದೆ ಮತ್ತು ಗಡಿಪಾರು ಕೂಡ ಆಗಿದ್ದನು. ಇತ್ತೀಚೆಗೆ ಆತನನ್ನ ಪೊಲೀಸ್ ಇಲಾಖೆ ಗಡಿಪಾರು ಮಾಡಿತ್ತು. ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಹಿನ್ನೆಲೆಯಲ್ಲಿ ಈತನನ್ನು ಚೈಲ್ಡ್ ರವಿ ಎಂದು ಕರೆಯತ್ತಿದ್ದರು. ನಂತರ ಈತ ಕೊಲೆ ದರೋಡೆ ಮತ್ತು ಇನ್ನಿತರೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಹಿಂದೆ ನಗರದಲ್ಲಿ ತನ್ನದೇ ಆದ ಪಡೆಯನ್ನು ಕಟ್ಟಿಕೊಂಡು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕ ಹುಟ್ಟಿಸಿದ್ದ. ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೆ ತನ್ನ ಪಾಡಿಗೆ ತಾನಿದ್ದನು. ಆದರೂ ಈಗ ಕೊಲೆಯಾಗಿರುವುದು ಯಾವ ಕಾರಣಕ್ಕೆ ಎಂಬುದಾಗಿ ನಿಖರವಾಗಿ ತಿಳಿದು ಬಂದಿಲ್ಲ.

ಕೊಲೆಗೆ ಕಾರಣವಾಯಿತೇ ಜಗಳ?
ಮಂಗಳವಾರ ರಾತ್ರಿ ಚೈಲ್ಡ್ ರವಿ ಮತ್ತು ಆತನ ಸ್ನೇಹಿತರ ಜತೆ ಫೋನಿನಲ್ಲಿ ಮಾತನಾಡುವಾಗ ರವಿಯನ್ನು ಏಕವಚನದಲ್ಲಿ ಚೈಲ್ಡ್ ರವಿ ಎಂದು ಕರೆದ ಎಂಬ ಕಾರಣಕ್ಕಾಗಿ ಫೋನಿನಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಅಶ್ಲೀಲ ಪದಗಳನ್ನು ಬಳಸಿ ಒಬ್ಬರನ್ನೊಬ್ಬರು ನಿಂದಿಸಿದ್ದಾರೆ. ಆಗ ಸ್ನೇಹಿತ ನೀನು ಇರುವ ಜಾಗಕ್ಕೆ ಬಂದು ನಿನ್ನನ್ನು ಹೊಡೆಯುತ್ತೇನೆ ಎಂಬ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ವಿಚಾರಕ್ಕೆ ರವಿ ಕೊಲೆಯಾಯಿತೇ ಅಥವಾ ಇನ್ಯಾವುದಾದರೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಯಿತೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹತ್ಯೆಕೋರರ ಬಂಧನಕ್ಕೆ ತಂಡ ರಚನೆ:
ರವಿ ಕೊಲೆ ಮಾಡಿ ಪರಾರಿಯಾಗಿರುವ ಹತ್ಯೆಕೋರರ ಬಂಧನಕ್ಕೆ ಈಗಾಗಲೇ ತಂಡ ರಚನೆ ಮಾಡಿದ್ದು, ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ಮೊಹಮ್ಮದ್ ಸುಜಿತಾ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚೈಲ್ಡ್ ರವಿ ಈ ಹಿಂದೆ ಐದಾರು ಪ್ರಕರಣದಲ್ಲಿ ಭಾಗಿಯಾಗಿ ಗಡಿಪಾರು ಮತ್ತು ಗೂಂಡ ಕಾಯ್ದೆಯಲ್ಲಿ ಆತನನ್ನ ಬಂಧಿಸಿ ಶಿಕ್ಷೆಗೆ ಒಳಪಡಿಸಲಾಗಿತ್ತು. 2020ರಿಂದ ಈಚೆಗೆ ಆತ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ. ಪೊಲೀಸ್ ಇಲಾಖೆ ಜಿಲ್ಲೆಯ ಎಲ್ಲಾ ರೌಡಿಶೀಟರ್‌ಗಳ ಮೇಲೆ ನಿಗಾ ವಹಿಸಿದೆ. ಅದೇ ರೀತಿ ಚೈಲ್ಡ್ ರವಿಯ ಮೇಲೆ ಕೂಡ ನಿಗಾ ಇಟ್ಟಿತ್ತು. ಆದರೆ ಇಂದು ಬರ್ಬರವಾಗಿ ಕೊಲೆಯಾಗಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.