ಜಿಲ್ಲೆ

ನಟಿ ಲೀಲಾವತಿ ಸ್ಮಾರಕ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಚಂದನಚನದ ಹಿರಿಯ ನಟಿ ದಿವಂಗತ ಡಾ.ಎಂ.ಲೀಲಾವತಿ ಅವರ ನೆನಪಿಗಾಗಿ ಅವರ ಪುತ್ರ ವಿನೋದ್‌ರಾಜ್ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಲೀಲಾವತಿ ಸ್ಮಾರಕವನ್ನು ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು.

‘ವರನಟಿ ಡಾ.ಎಂ.ಲೀಲಾವತಿ ದೇಗುಲ’ ಶೀರ್ಷಿಕೆಯಡಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು, ವಿವಿಧ ಮಠಾಧೀಶರು, ಹಿರಿಯ ರಾಜಕಾರಣಿಗಳು ಸಾಕ್ಷಿಯಾದರು. ಕುಟುಂಬಸ್ಥರ ಸಮ್ಮುಖದಲ್ಲಿ ಬೆಳಗ್ಗೆ ಸ್ಮಾರಕಕ್ಕೆ ಹೋಮ, ಹವನ ಮೂಲಕ ಪೂಜೆ ನೆರವೇರಿತು. ಜತೆಗೆ 2ಸಾವಿರಕ್ಕೂ ಹೆಚ್ಚು ಮಂದಿಗೆ ಊಟ ಸಿದ್ಧಪಡಿಸಲಾಗಿತ್ತು. ಸಾವಿರಾರು ಸಂಖ್ಯೆ ಅಭಿಮಾನಿಗಳು ಸಾರ್ವಜನಿಕರು ಭೇಟಿ ನೀಡಿ ಸ್ಮಾರಕ ದರ್ಶನ ಮಾಡಿದರು.

ಸಮಾರಂಭದಲ್ಲಿ ಸ್ವಯಂ ಪ್ರೇರಿತ ರಕ್ತ ಕೇಂದ್ರದಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಸುಮಾರು 80 ಯೂನಿಟ್ ರಕ್ತ ಸಂಗ್ರಹವಾಗಿದೆ. ಸಾರ್ವಜನಿಕರು ಸೇರಿ ಪತ್ರಕರ್ತರೂ ರಕ್ತದಾನ ಮಾಡಿದರು.

ಬಸವಣ್ಣ ದೇವರ ಮಠದಶ್ರೀ ಸಿದ್ದಲಿಂಗಸ್ವಾಮೀಜಿ, ನಟರಾದ ಕುಮಾರ್‌ಗೋವಿಂದ್, ಅಭಿಜಿತ್, ಹಿರಿಯ ನಟಿ ಗಿರಿಜಾಲೋಕೇಶ್, ಪದ್ಮವಾಸಂತಿ, ಲಕ್ಷ್ಮೀ ದೇವಮ್ಮ ಶೈಲಾ ಶ್ರೀಉಮೇಶ್, ಬ್ಯಾಂಕ್‌ಜನಾರ್ದನ್, ಹೊನ್ನಹಳ್ಳಿ ಕೃಷ್ಣ, ಸುದರ್ಶನ್, ಸುಮಿತ್ರಾಗುರು ನಿರ್ದೇಶಕ ಉಮೇಶ್, ಮುದ್ದುರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷ ಸಂತೋಷ್‌ನಾಯಕ್, ಯಂಟಗಾನಹಳ್ಳಿ ಗ್ರಾ.ಪಂ ಅಧ್ಯಕ್ಷ ರಾಹುಲ್‌ಗೌಡ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾದ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ಉದ್ಯಮಿ ಚಿಕ್ಕಹನುಮೇಗೌಡ, ಮುಖಂಡ ಮಂಜುನಾಥಯ್ಯ, ಕುಮಾರ್ ಇದ್ದರು.

ಸಮಾಜಕ್ಕೆ ಮಾದರಿಯಾದ ತಾಯಿ-ಮಗ: ತಾಯಿಗೆ ದೇಗುಲ ನಿರ್ಮಾಣ ಮಾಡುವ ಮೂಲಕ ದಿವಂಗತ ಲೀಲಾವತಿ ಅವರ ಪುತ್ರ ನಟ ವಿನೋದ್‌ರಾಜ್ ಮಾದರಿಯಾಗಿದ್ದಾರೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಬಣ್ಣಿಸಿದರು. ತಾಯಿ-ಮಗನ ಬಾಂಧವ್ಯವನ್ನು ಕಾಣಬೇಕಾದರೆ ಲೀಲಾವತಿ ಹಾಗೂ ಪುತ್ರ ವಿನೋದ್‌ರಾಜ್ ಅವರನ್ನು ನೋಡಬೇಕು. ಸಮಾಜದಲ್ಲಿ ಉಳ್ಳವರು ತಾಯಿ ಮೃತಪಟ್ಟ ನಂತರ ಮರೆಯುವ ಸನ್ನಿವೇಶದಲ್ಲಿ ತಾಯಿಗೆ ಸ್ಮಾರಕ ನಿರ್ಮಾಣ ಮಾಡಿರುವುದು ಮಾದರಿ ಎನಿಸಿದೆ. ಈ ಭಾಗದ ಜನರ ಶ್ರೇಯೋಭಿವೃದ್ಧಿ ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಲೀಲಾವತಿ ಅವರು ಮಾಡಿದ್ದು, ತಾಯಿ ಮಾಡುತ್ತಿದ್ದ ಸೇವೆಯನ್ನು ಪುತ್ರ ಮುಂದುವರಿಸುತ್ತಿರುವುದು ಸ್ವಾಗತಾರ್ಹ. ಗ್ರಾಮೀಣ ಭಾಗದ ಜನರಿಗೆ ಆಸ್ಪತ್ರೆ, ಪುಶುಗಳಿಗೆ ಪಶು ಆಸ್ಪತ್ರೆ ಸೇರಿ ಹಿರಿಯ ಕಲಾವಿದರಿಗೆ ಅರ್ಥಿಕ ಸಹಾಯ ಮಾಡಿ ಮಾದರಿಯಾಗಿದ್ದಾರೆ ಎಂದರು.

ವಿನೋದ್ ರಾಜ್ ಜತೆ 7 ಕೋಟಿ ಜನರಿದ್ದಾರೆ!: ದೇವರಿಗೆ ದೇವಾಲಯ ಕಟ್ಟುವುದನ್ನು ನೋಡಿದ್ದೇವೆ. ತಾಯಿಗೊಂದು ದೇವಾಲಯ ಕಟ್ಟಿರುವುದನ್ನು ನೋಡಿದರೆ ಈ ಬೆಳವಣಿಗೆ ಎಲ್ಲ ಜನರ ಮನದಲ್ಲಿ ಶಾಶ್ವತವಾಗಿರಲಿದೆ ಎಂದು ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಬಣ್ಣಿಸಿದರು. ತಾಯಿಯನ್ನು ಕಳೆದುಕೊಂಡು ಪುತ್ರ ವಿನೋದ್ ರಾಜ್ ಅನಾಥನಾಗಿದ್ದೇನೆ ಎಂದು ತಿಳಿಸಿದ್ದು, ಆದರೆ ಅವರೊಂದಿಗೆ 7ಕೋಟಿ ಜನರು ಇದ್ದಾರೆ ಎಂಬುದನ್ನು ಮನಗಾಣಬೇಕು. ಮಾತೃ ದೇವೋ ಭವ ಎಂಬಂತೆ ತಾಯಿ ಸ್ಥಾನ ಅತ್ಯಂತ ಪವಿತ್ರ. ತಾಯಿ ಹೆಸರಿನಲ್ಲಿ ದೇವಾಲಯ ನಿರ್ಮಾಣದ ಜತೆಗೆ ಸಮಾಜ ಕಾರ್ಯಕ್ಕೆ ಮುಂದಾಗಿರುವ ಪುತ್ರ ವಿನೋದ್‌ರಾಜ್ ಕಾರ್ಯ ಶ್ಲಾಘನೀಯ ಎಂದರು.

ಪ್ರತಿನಿತ್ಯ ದಾಸೋಹ ವ್ಯವಸ್ಥೆ: ನನ್ನ ಆಸೆಯಂತೆ ತಾಯಿ ಸ್ಮಾರಕ ನಿರ್ಮಿಸಿದ್ದೇನೆ. ಮೊದಲ ಸಿನಿಮಾದಿಂದ ಕೊನೆಯ ಸಿನಿಮಾವರೆಗೆ ಗ್ಯಾಲರಿ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ. ಅಮ್ಮನ ಸಮಾಧಿ ಕೇವಲ ಸಮಾಧಿ ಅಲ್ಲ, ಅದು ಆಧ್ಯಾತ್ಮಿಕ ಕ್ಷೇತ್ರವಾಗಿ ಮಾಡುತ್ತೇವೆ. ಪ್ರತಿನಿತ್ಯ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸ್ಮಾರಕ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಸರ್ವರಿಗೂ ಧನ್ಯವಾದಗಳು ಎಂದು ನಟ ವಿನೋದ್‌ರಾಜ್ ತಿಳಿಸಿದರು.