ಜಿಲ್ಲೆ

ನಟಿ ಲೀಲಾವತಿ ಕಾರ್ಯ ಮಾದರಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಬಣ್ಣನೆ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ

ನೆಲಮಂಗಲ: ಜಮೀನು ಮಾರಾಟ ಮಾಡಿದ್ದ ಹಣದಲ್ಲಿ ಉಚಿತ ಆಸ್ಪತ್ರೆ ನಿರ್ಮಿಸಲು ಹೊರಟಿರುವ ಹಿರಿಯ ನಟಿ ಡಾ.ಎಂ.ಲೀಲಾವತಿ ಅವರ ಕಾರ್ಯ ಸಮಾಜಕ್ಕೆ ಮಾದರಿ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಡಾ.ಎಂ.ಲೀಲಾವತಿ ಅವರ ನೆರವಿನಿಂದ ಆಗುತ್ತಿರುವ ಆಸ್ಪತ್ರೆ ನಿರ್ಮಾಣ ಕಾರ್ಯಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ನಟಿ ಲೀಲಾವತಿ ಅವರು ನಮ್ಮ ಕ್ಷೇತ್ರದಲ್ಲಿರುವುದು ಹೆಮ್ಮೆಯ ವಿಷಯ. ಈ ಭಾಗದ ಜನರಿಗೆ ಉಪಯೋಗ ಮಾಡುವ ನಿಟ್ಟಿನಲ್ಲಿ ದಶಕದಿಂದಲೂ ಶ್ರಮಿಸುತ್ತಿರುವುದು ಸಂತಸದ ಸಂಗತಿ. ಈ ಭಾಗದ ರೈತಾಪಿ ವರ್ಗದವರಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಸರ್ಕಾರ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭ ಮಾಡುವ ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದೇ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗುವುದು. ಹಿರಿಯ ನಟಿ ಲೀಲಾವತಿ ಅವರು ಒಪ್ಪಿದರೆ ಶಾಸಕರ ಅನುದಾನ ನೀಡಲಾಗುವುದು. ಇಲ್ಲವಾದಲ್ಲಿ ನನ್ನ ಸ್ವಂತ ಹಣವನ್ನು ಆಸ್ಪತ್ರೆ ನಿರ್ಮಾಣಕ್ಕೆ ನೀಡಿ ಅಳಿಲು ಸೇವೆ ಮಾಡಲಾಗುವುದು ಎಂದರು.

ಅರಣ್ಯ ಇಲಾಖೆ ಒತ್ತುವರಿ: ರೈತರ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ 2014ರಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗಿತ್ತು. ರಾಜ್ಯಾದ್ಯಂತ 6 ಲಕ್ಷ ಭೂಮಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಶಾಸಕರು ತಿಳಿಸಿದರು.

ನಟ ವಿನೋದ್‌ರಾಜ್ ಮಾತನಾಡಿ, ಈ ಭಾಗದ ರೈತರಿಗೆ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ತಾಯಿ ಲೀಲಾವತಿ ಅವರ ಬಹುದಿನ ಕನಸು. ಈ ಹಿಂದೆಯೇ ಒಂದು ಆಸ್ಪತ್ರೆ ನಿರ್ಮಿಸಿ ಆರೋಗ್ಯ ಇಲಾಖೆಗೆ ನೀಡಲಾಗಿತ್ತು. ಈಗ ನಮ್ಮ ಸ್ವಂತ ಆಸ್ತಿ ಮಾರಾಟ ಮಾಡಿ, 50 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯರಾದ ರಾಮಕೃಷ್ಣಪ್ಪ, ಮಾರೇಗೌಡ, ಮುನಿರಾಜು, ಸಂತೋಷ್‌ಕುಮಾರ್, ವೈ.ಆರ್.ಶ್ರೀನಿವಾಸ್, ಶಿವಕುಮಾರ್, ಎನ್.ರವಿ, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಇಟಿಕೆ ರಾಜು ಮತ್ತಿತರರು ಉಪಸ್ಥಿತರಿದ್ದರು.