ಹುಬ್ಬಳ್ಳಿ: ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಕನ್ನಡ ಚಲನಚಿತ್ರ ರಂಗದ ಪರವಾಗಿ ಹ್ಯಾಟ್ರಿಕ್ ಹೀರೊ ಡಾ. ಶಿವರಾಜಕುಮಾರ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ನೇತೃತ್ವದಲ್ಲಿ ಬುಧವಾರ ಸನ್ಮಾನಿಸಲಾಯಿತು.
2015ರ ಸೆಪ್ಟೆಂಬರ್ 13ರಂದು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನಡೆಸಿದ ಪ್ರತಿಭಟನಾ ಸಭೆಯ ಭಾವಚಿತ್ರ ನೀಡಿ, ಕಂಬಳಿ ಹಾಗೂ ಹಸಿರು ಶಾಲು ಹೊದಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಶಿವರಾಜಕುಮಾರ, ಮಹದಾಯಿ ನದಿ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಶೀಘ್ರ ಕಾಮಗಾರಿ ಪ್ರಾರಂಭಿಸಲಿ ಎಂದು ಹಾರೈಸಿದರು.
ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆ ಪರಿಹಾರಕ್ಕಾಗಿ ಕನ್ನಡ ಚಿತ್ರರಂಗ ಹುಬ್ಬಳ್ಳಿಗೆ ಆಗಮಿಸಿ ಹೋರಾಟ ನಡೆಸಿದೆ ಎಂದ ಶಿವಾನಂದ ಮುತ್ತಣ್ಣವರ, ಚಿತ್ರರಂಗದ ಕಲಾವಿದರು ಹಾಗೂ ಕನ್ನಡ ಚಿತ್ರರಂಗದ ವಾಣಿಜ್ಯೋದ್ಯಮ ಮಂಡಳಿಗೆ ಅಭಿನಂದಿಸಿದರು. ಕನ್ನಡಪರ ಹೋರಾಟಗಾರ ಪಿ. ವಿಶ್ವನಾಥ, ರಾಮಣ್ಣ ಬಡಿಗೇರ, ಶಿವು ಗೌರಿ, ಸಂಜಯ ನವಲಗುಂದಮಠ, ಪ್ರವೀಣ ಸಿದ್ದನಗೌಡ್ರ, ಸಂದೀಪ ಕಾಮಕಾರ ಮತ್ತಿತರರಿದ್ದರು.