ಜಿಲ್ಲೆ

ನಟ ಗಣೇಶ್ ಮನೆ ಪ್ರವೇಶಿಸಲು ಯತ್ನಿಸಿದ ರೈತ ಮುಖಂಡರಿಗೆ ತಡೆ

ರಾಜಣ್ಣ

ಗುಂಡ್ಲುಪೇಟೆ: ಚಿತ್ರನಟ ಗಣೇಶ್ ಅವರ ಜಮೀನಿನಲ್ಲಿ ನಿರ್ಮಿಸುತ್ತಿರುವ ಮನೆ ಪ್ರವೇಶಿಸಲು ಮುಂದಾದ ರೈತ ಮುಖಂಡರನ್ನು ಸ್ಥಳೀಯರು ತಡೆದು ಹಿಮ್ಮೆಟ್ಟಿಸಿದರು.


ಬಂಡೀಪುರ ಹುಲಿ ಯೋಜನೆಯ ಪರಿಸರ ಸೂಕ್ಷ್ಮ ಪ್ರದೇಶದ ಜಕ್ಕಹಳ್ಳಿ ಗ್ರಾಮದ ಜಮೀನಿನಲ್ಲಿ ಗಣೇಶ್ ಮನೆ ನಿರ್ಮಾಣ ಮಾಡುತ್ತಿದ್ದಾರೆ. ತಾತ್ಕಾಲಿಕ ಮನೆ ನಿರ್ಮಾಣ ಮಾಡಲು ಅನುಮತಿ ಪಡೆದು ಬೃಹತ್ ಕಟ್ಟಡ ಮಾಡುತ್ತಿದ್ದರು ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಣೇಶ್ ಅವರಿಗೆ ನೋಟಿಸ್ ನೀಡಿ ಕಟ್ಟಡದ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿತ್ತು.


ಅರಣ್ಯ ಇಲಾಖೆಯ ನೋಟಿಸ್ ವಿರುದ್ಧ ಗಣೇಶ್ ನ್ಯಾಯಾಲಯದ ಮೆಟ್ಟಿಲೇರಿ ಮನೆ ಕಟ್ಟಲು ಅನುಮತಿ ಪಡೆದಿದ್ದರು. ಇದು ಪರಿಸರವಾದಿಗಳು ಹಾಗೂ ರೈತರ ಅಸಮಾಧಾನಕ್ಕೆ ಕಾರಣವಾಗಿದ್ದು, ಬಂಡೀಪುರದ ಕಾಡಂಚಿನ ಗ್ರಾಮಗಳಲ್ಲಿ ಸೆಲೆಬ್ರಿಟಿಗಳು ಜಮೀನು ಖರೀದಿಸಿ ಕೃಷಿ ಚಟುವಟಿಕೆ ನಡೆಸುವುದಾಗಿ ಅನುಮತಿ ಪಡೆದು ಆನೆ ಕಾರಿಡಾರ್ ಬಂದ್ ಮಾಡುತ್ತಿದ್ದಾರೆ. ಇದರಿಂದ ಆನೆಗಳು ಗ್ರಾಮಗಳತ್ತ ದಾಳಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಲ್ಲದವರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಗುರುವಾರ ರೈತ ಮುಖಂಡರು ಮಾಡ್ರಹಳ್ಳಿ ಮಹದೇವಪ್ಪ ಹಾಗೂ ಹಾಲಹಳ್ಳಿ ಮಹೇಶ್ ನೇತೃತ್ವದಲ್ಲಿ ಗಣೇಶ ಅವರ ಜಮೀನಿಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದರು.


ಈ ವೇಳೆ ಸ್ಥಳದಲ್ಲೇ ಜಮಾಯಿಸಿದ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಮುಖಂಡರು ಗಣೇಶ ಅವರ ಜಮೀನಿಗೆ ತೆರಳುವುದಕ್ಕೆ ಅಡ್ಡಿಪಡಿಸಿದರು.
ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿಯಿಂದ ರೈತರು ಯಾವುದೇ ಬೆಳೆ ಬೆಳೆಯಲಾಗದೆ ಹೋಟೆಲ್, ರೆಸಾರ್ಟ್ಸ್ ಮುಂತಾದ ಕಡೆ ಕೆಲಸ ಮಾಡಿ ಜೀವನ ನಡೆಸುವಂತಾಗಿದೆ. ಹಲವಾರು ರೈತರು ಕಾಡುಪ್ರಾಣಿಗಳ ದಾಳಿಯಿಂದಾಗಿ ಮೃತಪಟ್ಟಿರುವ ಘಟನೆಗಳು ಸಂಭವಿಸಿದ್ದರೂ ಆಗ ನೆರವಿಗೆ ಬಾರದ ರೈತ ಮುಖಂಡರು ಈಗ ಬಂದಿದ್ದಾರೆ ಎಂದು ಯುವಕರು ಆಕ್ರೋಶವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಕೆಲವೇ ಸಂಖ್ಯೆಯ ರೈತರು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ವಾಪಸಾದರು.
ವಿಜಯವಾಣಿಯೊಂದಿಗೆ ಮಾತನಾಡಿದ ಮಾಡ್ರಹಳ್ಳಿ ಮಹದೇವಪ್ಪ, ತಾಲೂಕು ಆಡಳಿತ ಸೆಲೆಬ್ರಿಟಿಯ ಬೆನ್ನಿಗೆ ನಿಂತಿದೆ. ಇದನ್ನು ಗಮನಿಸದರೆ ಸೂಕ್ಷ್ಮ ಪರಿಸರ ವಲಯದಲ್ಲಿ ಮನೆ ಕಟ್ಟಿಕೊಳ್ಳಲು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಭೇಟಿ ನೀಡದಿರುವುದೇ ಸಾಕ್ಷಿಯಾಗಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.


ಗುಂಡ್ಲುಪೇಟೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ, ಹಂಗಳ ನಾಡಕಚೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ನದೀಂ ಹುಸೇನ್ ಹಾಗೂ ಸಿಬ್ಬಂದಿ ಇದ್ದರು.