ಹಾಸನ: ನಗರದ ಮಹಾವೀರ ವೃತ್ತದ ಬಳಿ ಪಾದಚಾರಿ ಮಾರ್ಗದ ಮೇಲೆ ಇಟ್ಟುಕೊಂಡಿದ್ದ ಹೂವು ಹಾಗು ಹಣ್ಣಿನ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ನಗರಸಭೆ ಆಯುಕ್ತ ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತೆರವು ಕಾರ್ಯಾಚರಣೆ ವೇಳೆ ವ್ಯಾಪಾರಿಗಳು ಹಾಗು ಅಧಿಕಾರಿಗಳ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಯಾವುದೇ ಸೂಚನೆ ನೀಡದೆ ಏಕಾಏಕಿ ತೆರವು ಮಾಡಿದರೆ ಹೇಗೆ ಎಂದು ವ್ಯಾಪಾರಿಗಳು ಪ್ರಶ್ನಿಸಿದರು. ಆದರೆ ನಗರಸಭೆ ಆಯುಕ್ತ ನರಸಿಂಹಮೂರ್ತಿ ಅವರು ಯಾವುದಕ್ಕೂ ಜಗ್ಗದೆ ಕೂಡಲೇ ಸ್ಥಳಾಂತರ ಮಾಡಬೇಕೆಂದು ಆದೇಶಿಸಿದರು. ಸುಗಮ ಸಂಚಾರಕ್ಕೆ ಜಾಗ ಬಿಟ್ಟು ವ್ಯಾಪಾರ ಮಾಡಿಕೊಳ್ಳಿರಿ ಎಂದು ಸೂಚಿಸಿದರು.
ಮಹಾವೀರ ವೃತ್ತದಿಂದ ಹಾಸನಾಂಬ ಕಲಾಕ್ಷೇತ್ರ ಮಾರ್ಗ ಹಾಗು ಕಸ್ತೂರ ಬಾ ರಸ್ತೆಯ ಎರಡೂ ಕಡೆ ಅಂಗಡಿಗಳನ್ನು ತೆರೆಯಲಾಗಿತ್ತು. ಪಾದಚಾರಿ ಮಾರ್ಗ ಮಾತ್ರವಲ್ಲದೆ ರಸ್ತೆ ಮೇಲೂ ಅಂಗಡಿ ಸಾಮಾಗ್ರಿ ಇಟ್ಟಿದ್ದರಿಂದ ವಾಹನಗಳ ಓಡಾಡಕ್ಕೆ ಭಾರೀ ತೊಂದರೆಯಾಗಿತ್ತು. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರಿಂದ ನಗರಸಭೆ ಕಾರ್ಯಾಚರಣೆ ಕೈಗೊಂಡಿತು.