filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48; 
ಜಿಲ್ಲೆ

ನಗರಸಭೆಯಲ್ಲೂ ಮಾರ್ದನಿಸಿದ ನೀರಿನ ಸಮಸ್ಯೆ

ಚಿತ್ರದುರ್ಗ: ನಗರದ ವಿವಿಧ ಬಡಾವಣೆಗಳಲ್ಲಿ 15 ದಿನವಾದರೂ ನೀರು ಪೂರೈಕೆಯಾಗಿಲ್ಲ. ಜನರಿಗೆ ಉತ್ತರ ಹೇಳಿ ಸಾಕಾಗಿದೆ. ನಿಮ್ಮ ನಿರ್ಲಕ್ಷವೇ ಕಾರಣವೆಂದು ಅಧಿಕಾರಿಗಳ ವಿರುದ್ಧ ಐದಾರು ಸದಸ್ಯರು ಮುಗಿಬಿದ್ದರು.

ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ನೀರಿನ ಸಮಸ್ಯೆ ಕುರಿತು ಬೆಳಕು ಚೆಲ್ಲಿದ ‘ವಿಜಯವಾಣಿ’ ಪತ್ರಿಕೆಯ ವರದಿ ಪ್ರತಿಧ್ವನಿಸಿತು. ಈ ವಿಚಾರವಾಗಿ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸದಸ್ಯ ಜೈಲುದ್ದೀನ್ ಮಾತನಾಡಿ, ನನ್ನ ವ್ಯಾಪ್ತಿಯ 25ನೇ ವಾರ್ಡ್‌ನಲ್ಲಿ 2 ತಿಂಗಳಿನಿಂದಲೂ ನೀರಿನ ಸಮಸ್ಯೆ ಇದೆ. ಪೂರೈಸದಿದ್ದರೆ, ಜನ ಸುಮ್ಮನಿರುತ್ತಾರಾ?. ಅವರಿಗೆ ಏನೆಂದು ಉತ್ತರಿಸಬೇಕು. ಕಳೆದ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ. ಸದಸ್ಯರ ಮಾತಿಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.

ನೀರು ಸರಬರಾಜು ಇಂಜಿನಿಯರ್ ಮುನಿಸ್ವಾಮಿ ಮಾತನಾಡಿ, ಕಳೆದೊಂದು ವಾರದಿಂದ ವಿವಿಧೆಡೆ ಸಮಸ್ಯೆ ಉಂಟಾಗಿತ್ತು. ಆದರೀಗ ಪೂರೈಕೆಯಾಗುತ್ತಿದೆ. 25ನೇ ವಾರ್ಡ್‌ನಲ್ಲಿ ಕೊಳವೆಬಾವಿ ಮೂಲಕ ನೀರು ಸರಬರಾಜಿಗೂ ಕ್ರಮವಹಿಸಿದ್ದೇವೆ ಎಂದರು.

ಸಿಂಗಲ್ ಮೋಟಾರ್ ಕಾರಣಕ್ಕೆ ನೀರೇ ಬರುತ್ತಿಲ್ಲ. ಸುಳ್ಳು ಹೇಳಬೇಡಿ ಎಂದು ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಜೈಲುದ್ದೀನ್, ಸ್ಥಳದಲ್ಲೇ ಆಪರೇಟರ್‌ಗೆ ಕರೆ ಮಾಡಿ ಎಷ್ಟು ದಿನದಿಂದ ಬರುತ್ತಿಲ್ಲವೆಂದು ಪ್ರಶ್ನಿಸಿದ ವೇಳೆ 15ರಿಂದ 20 ದಿನವಾಯಿತೆಂಬ ಉತ್ತರ ಕೇಳಿಬಂತು. ಬೇಸಿಗೆ ಅವಧಿಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ನಗರಸಭೆ ಮರ್ಯಾದೆ ಕಾಪಾಡಿ ಎಂದು ಅಧ್ಯಕ್ಷರು, ಪೌರಾಯುಕ್ತರಿಗೆ ಒತ್ತಾಯಿಸಿದರು.

ಸದಸ್ಯ ಮೀನಾಕ್ಷಿ ಮಾತನಾಡಿ, ನನ್ನ ವಾರ್ಡ್‌ನಲ್ಲೂ ತಿಂಗಳಿನಿಂದ ಸಮಸ್ಯೆ ಇದ್ದು, ನೀರಿಗಾಗಿ ಜನ ಪರದಾಡಿದ್ದಾರೆ. ಸದಸ್ಯರ ಮಾತನ್ನೇ ಕೇಳದ ಅಧಿಕಾರಿಗಳು, ಜನರ ಮಾತಿಗೆ ಮನ್ನಣೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಟ್ಯಾಂಕರ್ ಮೂಲಕ ಪೂರೈಸಿ: ಮಂಜುನಾಥ್ ಗೊಪ್ಪೆ, ಎಸ್.ಭಾಸ್ಕರ್, ವೆಂಕಟೇಶ್, ಶಶಿ ಸೇರಿ ಇನ್ನಿತರೆ ಸದಸ್ಯರು ನೀರಿನ ಸಮಸ್ಯೆ ವಿಚಾರಕ್ಕೆ ದನಿಗೂಡಿಸಿದರು. ಪೈಪ್‌ಲೈನ್ ಹೊಡೆದಿದೆ, ವಿದ್ಯುತ್ ಪರಿವರ್ತಕ ಸುಟ್ಟಿದೆ ಸೇರಿ ಇನ್ನಿತರೆ ಕಾರಣ ಏನೇ ಇದ್ದರೂ ಟ್ಯಾಂಕರ್ ಮೂಲಕವಾದರೂ ಪೂರೈಕೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಬಿಲ್ ಪಾವತಿಗೆ ಕ್ರಮವಹಿಸಿ: ನನ್ನ ವಾರ್ಡ್‌ನಲ್ಲಿ ಗುತ್ತಿಗೆದಾರರಿಂದ ಕೆಲ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್ ಆದರೂ ಇನ್ನೂ ಬಿಲ್ ಪಾವತಿಸಿಲ್ಲ. ಕೂಡಲೇ ಪಾವತಿಗೆ ಕ್ರಮವಹಿಸಿ ಎಂದು ಎಸ್.ಭಾಸ್ಕರ್ ಆಗ್ರಹಿಸಿದರು.

ಜಕಾತಿ ವಸೂಲಾತಿ ರದ್ದುಗೊಳಿಸಿ: ಡಿಸಿ ಅವರ ಆದೇಶದಂತೆ ಈಚೆಗೆ ನಗರಸಭೆಯ 37 ಮಳಿಗೆ ಹರಾಜು ಪ್ರಕ್ರಿಯೆಯನ್ನು ಕೇವಲ 9 ಗಂಟೆ ಅವಧಿಯೊಳಗೆ ರದ್ದುಗೊಳಿಸಿದಂತೆ ಜಕಾತಿ ವಸೂಲಾತಿ ರದ್ದತಿಗೆ ಅವರೇ ಆದೇಶಿಸಿ 9 ತಿಂಗಳಾದರೂ ಏಕೆ ಕ್ರಮವಹಿಸಿಲ್ಲ ಎಂದು ಉಪಾಧ್ಯಕ್ಷೆ ಶ್ರೀದೇವಿ ಪೌರಾಯುಕ್ತರನ್ನು ಪ್ರಶ್ನಿಸಿದರು.

ಡಿಸಿ ಅವರ ಪತ್ರಾನುಸಾರ ಕ್ರಮಕ್ಕೆ ಕೌಶಾಲಾಭಿವೃದ್ಧಿ ಇಲಾಖೆ ಮುಖ್ಯ ಕಚೇರಿಗೆ ಪತ್ರ ಬರೆದಿದ್ದು, ಈವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದರು. ಜಕಾತಿ ವಸೂಲಾತಿ ಸಂಬಂಧ ಎರಡು ಬಾರಿ ಈಗಾಗಲೇ ಪರಿಶೀಲನೆ ಕೂಡ ನಮ್ಮ ಅಧಿಕಾರಿಗಳು ನಡೆಸಿದ್ದಾರೆ ಎಂದರು.

ರಸ್ತೆ ವಿಚಾರದ ಸಭೆ ಮುಂದೂಡಿಕೆ: ಮುಖ್ಯರಸ್ತೆ ಒತ್ತುವರಿ, ಸುಗಮ ಸಂಚಾರಕ್ಕಾಗಿ ಅಗತ್ಯವಿರುವೆಡೆ ಡಿವೈಡರ್‌ಗಳ ತೆರವು ಹಾಗೂ ನಗರದಲ್ಲಿ ರಸ್ತೆ ವಿಸ್ತರಣೆ ವಿಚಾರವಾಗಿ ಕರೆದಿದ್ದ ಸಭೆಯನ್ನು 35 ಸದಸ್ಯರಿಗೆ ಮಾಹಿತಿ ನೀಡದ ಕಾರಣಕ್ಕೆ ಮುಂದೂಡಲಾಯಿತು. ಪಕ್ಷಾತೀತವಾಗಿ ಎಲ್ಲರೂ ನಗರದ ಅಭಿವೃದ್ಧಿ ಬಯಸುತ್ತೇವೆ. ಹೀಗಾಗಿ ಎಲ್ಲರಿಗೂ ಮಾಹಿತಿ ಕೊಟ್ಟ ಬಳಿಕವೇ ಸಭೆ ನಡೆಸಲು ತೀರ್ಮಾನಿಸಲಾಯಿತು.

ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಸಭೆ 11.40ಕ್ಕೆ ಆರಂಭವಾಯಿತು. ನಿಯಮದ ಪ್ರಕಾರ ಅರ್ಧ ತಾಸು ಮುಂಚಿತವಾಗಿ ಹಾಜರಿರಬೇಕಿದ್ದ ಅಧ್ಯಕ್ಷರು, ಪೌರಾಯುಕ್ತರೇ ತಡವಾಗಿ ಬಂದರೆ ಹೇಗೆ ಎಂದು ಸದಸ್ಯ ಸರ್ದಾರ್ ಅಹಮ್ಮದ್ ಪಾಷಾ ಪ್ರಶ್ನಿಸಿದರು. ಕೆಲವರು ಕಾಟಾಚಾರಕ್ಕೆ ಸಭೆ ಏಕೆ ನಡೆಸುತ್ತೀರಿ ಎಂದು ತರಾಟೆ ತೆಗೆದುಕೊಂಡರು. ಪೌರಕಾರ್ಮಿಕರ ಬಳಿ ಕೆಲ ವಿಚಾರ ಚರ್ಚಿಸಿದ್ದರಿಂದಾಗಿ ತಡವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಪೌರಾಯುಕ್ತೆ ಎಂ.ರೇಣುಕಾ ಕ್ಷಮೆಯಾಚಿಸಿದರು.