ಜಿಲ್ಲೆ

ನಗರಸಭೆಯ ಎದುರು ಬಾಳೆಹಣ್ಣು ಸುರಿದ ವ್ಯಾಪಾರಸ್ಥರು!!

ವಿಜಯವಾಣಿ ಸುದ್ದಿಜಾಲ ಕಾರವಾರ
ಅಧಿಕಾರಿಗಳು ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬೀದಿಯ ಹೂವು, ಹಣ್ಣಿನ ವ್ಯಾಪಾರಿಗಳು ನಗರಸಭೆ ಕಚೇರಿಯ ಎದುರು ಗುರುವಾರ ಹಠಾತ್ ಪ್ರತಿಭಟನೆ ನಡೆಸಿದರು.
ನಗರದ ಈಜುಕೊಳದ ಹಿಂದಿನ ಹೂವು, ಹಣ್ಣಿನ ಮಾರುಕಟ್ಟೆಯನ್ನು ಬಂದ್ ಮಾಡಿ, ಮೊದಲು ನಗರದ ಮಾರುಕಟ್ಟೆ ಗಣಪತಿ ದೇವಸ್ಥಾನದ ಎದುರು, ನಂತರ ನಗರಸಭೆ ಕಚೇರಿಯ ಎದುರು ಸಾವಿರಾರು ರೂ.ಗಳ ಹೂವು, ಬಾಳೆ, ಪಪ್ಪಾಯ ಹಣ್ಣುಗಳನ್ನು ಸುರಿದು ಧರಣಿ ಕುಳಿತರು. ನಗರಸಭೆ ವಿರುದ್ಧ ಘೋಷಣೆ ಕೂಗಿದರು. "ನಾವು ಹತ್ತಾರು ವರ್ಷಗಳಿಂದ ಇದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆದರೆ, ಈಗ ಬೀದಿ ಬದಿಯಲ್ಲಿ ಹೂವು, ಹಣ್ಣುಗಳನ್ನು ಮಾರಾಟ ಮಾಡದಂತೆ ಅಧಿಕಾರಿಗಳು ಎಚ್ಚರಿಸುತ್ತಿದ್ದಾರೆ. ಹಣ್ಣುಗಳನ್ನು ರಸ್ತೆಗೆ ಎಸೆದು ಹಾಳು ಮಾಡಿದ್ದಾರೆ. ಹಣ, ಹಣ್ಣಿನ ಬುಟ್ಟಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ದುಡಿಯುವ ಬಡ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ"ಎಂದು ಆರೋಪಿಸಿದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ವ್ಯಾಪಾರಸ್ಥ ಮುಖಂಡರನ್ನು ತಮ್ಮ ಕೊಠಡಿಗೆ ಕರೆಸಿ ಮಾತುಕತೆ ನಡೆಸಿದರು. "ಹೂವು ಹಣ್ಣಿನ ವ್ಯಾಪಾರಕ್ಕಾಗಿಯೇ ನಗರದ ಹೃದಯ ಭಾಗದಲ್ಲಿ ನಗರಸಭೆಯಿಂದ ಪ್ರತ್ಯೇಕ ಜಾಗ ಮಾಡಿಕೊಟ್ಟಿದ್ದೇವೆ. ಅಲ್ಲಿನ ಮಳಿಗೆಗಳಿಗೆ ಸಂಖ್ಯೆ ನೀಡಲಾಗಿದೆ. ಶೌಚಗೃಹ ನಿರ್ಮಾಣ ಮಾಡಿಕೊಡಲಾಗಿದೆ. ನಗರದ ಸೌಂದರ್ಯ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಬೀದಿ ಬದಿ ಕಾಯಂ ವ್ಯಾಪಾರವನ್ನು ನಿಯಂತ್ರಿಸುವುದು ಅನಿವಾರ್ಯ. ಭಾನುವಾರದ ಸಂತೆ ಹಾಗೂ ಹಬ್ಬದ ಸಮಯದಲ್ಲಿ ಮಾತ್ರ ಬೀದಿ ಬದಿ ವ್ಯಾಪಾರಕ್ಕೆ ವಿನಾಯಿತಿ ನೀಡುತ್ತಿದ್ದೇವೆ. ಅದಕ್ಕೆ ವ್ಯಾಪಾರಸ್ಥರೂ ಸಹಕರಿಸಬೇಕು. ಆದರೆ, ಯಾವುದೇ ಸಾಮಗ್ರಿಗಳನ್ನು ಹೊತ್ತೊಯ್ಯುವುದು, ಹಾಳು ಮಾಡುವುದು ತಪ್ಪು ಹಾಗೆ ಮಾಡಿದಲ್ಲಿ ನಗರಸಭೆ ಸಿಬ್ಬಂದಿ ವಿರುದ್ಧ ಕ್ರಮ ವಹಿಸುತ್ತೇನೆ" ಎಂದರು.
ಪೌರಾಯುಕ್ತ ಆರ್.ಪಿ.ನಾಯ್ಕ, "ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾಗಿದೆ. ಅದರಂತೆ ನಾವು ಕ್ರಮ ವಹಿಸಿದ್ದೇವೆ. ಬೀದಿ ಬದಿ ಕುಳಿತುಕೊಳ್ಳದಂತೆ ಎಚ್ಚರಿಸಿದ್ದೇವೆಯೇ ಹೊರತು ಯಾರ ಮೇಲೂ ದೌರ್ಜನ್ಯ ಮಾಡಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ವ್ಯಾಪಾರ ಮಾಡಲು ಸ್ಥಳೀಯರೋ ಹೊರಗಿನವರೋ ಎಂದು ಕೇಳುತ್ತಾರೆ. ನಾವೇನು ಅಮೇರಿಕಾದಿಂದ ಬಂದಿಲ್ಲ. ಬೇರೆ ರಾಜ್ಯದವರೂ ಇಲ್ಲ. ಇದೇ ಊರಿನಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದೇವೆ. ಫುಟ್‌ಪಾತ್‌ನಲ್ಲಿ ತರಕಾರಿ ಮಾರಲು ಅವಕಾಶ ನೀಡಿ, ಹೂವು, ಹಣ್ಣುಗಳಿಗೆ ಅವಕಾಶ ನೀಡದೇ ತಾರತಮ್ಯ ಮಾಡಲಾಗುತ್ತಿದೆ.
ಅಬ್ಬಾಸ್
ವ್ಯಾಪಾರಸ್ಥ