ಜಿಲ್ಲೆ

ನಗರಸಭೆಯ ಎದುರು ಅಶೋಕ ಬಡಾವಣೆಯ ನಿವಾಸಿ ಪ್ರತಿಭಟನೆ

ಹಾಸನ: ನಗರಸಭೆಯ ವಾರ್ಡ್ ನಂ. 2ರ ಅಶೋಕ ಬಡಾವಣೆಯಲ್ಲಿ ಒತ್ತುವರಿ ಜಾಗ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಸೋಮವಾರ ನಿವಾಸಿಗಳು ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಿವಾಸಿ ಸುನಿಲ್ ಅವರು ಮಾತನಾಡಿ, ಅಶೋಕ ನಗರ ಬಡಾವಣೆಯಲ್ಲಿ ಮೊದಲ ಮತ್ತು ಎರಡನೇ ಅಡ್ಡ ರಸ್ತೆ ಎಂದು ವಿಭಾಗ ಮಾಡಲಾಗಿದೆ. ಸ್ಲಂ ಬೋರ್ಡ್‌ನಿಂದ ಕಾಯ್ದಿರಿಸದ್ದ ಜಾಗವನ್ನು ವ್ಯಕ್ತಿಯೊಬ್ಬ ತಮಗೆ ಸೇರಿದ್ದೆಂದು ಹೇಳಿಕೊಂಡು ಒತ್ತುವರಿ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸುತ್ತಲೂ ತಂತಿಬೇಲಿ ಹಾಕಿ ಯಾರೂ ತಿರುಗಾಡದಂತೆ ಮಾಡಿದ್ದಾರೆ. ಅಲ್ಲಿ 16 ಗುಂಟೆ ಖರಾಬು ಜಾಗವಿದ್ದು ಸಾರ್ವಜನಿಕ ರಸ್ತೆಗೆ ಅನುಕೂಲವಾಗಲೆಂದು ಬಿಡಲಾಗಿತ್ತು. ಆದರೆ ವ್ಯಕ್ತಿ ಅದೂ ತನಗೆ ಸೇರಿದ್ದೆಂದು ತಗಾದೆ ತೆಗೆಯುತ್ತಿದ್ದು ಸಮಸ್ಯೆ ಸೃಷ್ಟಿಯಿಸಿದೆ ಎಂದರು.
ಆ ವ್ಯಕ್ತಿಗೆ ಸೇರಿದ ಜಾಗವಿದ್ದು ಅದರ ಮೇಲಷ್ಟೇ ಪ್ರಭುತ್ವ ಸಾಧಿಸಬೇಕು. ಸರ್ಕಾರಿ ಜಾಗವೂ ತಮಗೆ ಸೇರಿದ್ದೆಂದು ವಾದ ಮಾಡುತ್ತಿರುವುದು ಸರಿಯಲ್ಲ. ನಗರಸಭೆ ಅಧ್ಯಕ್ಷರು ಹಾಗು ಆಯುಕ್ತರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನಿವಾಸಿಗಳಾದ ಹೇಮಂತ್, ಅನಿಲ್, ಮಹಾದೇವ್, ಪ್ರದೀಪ್, ಸಾಗರ್, ಶಾಮಸುಂದರ್, ಸಂಜಯ್, ಸಾಗರ್, ಅರುಣ್, ಅಶ್ವಥ್ ಇತರರಿದ್ದರು.