ಜಿಲ್ಲೆ

ನಗರಸಭೆಗೆ ಗ್ರಾಮಗಳ ಸೇರ್ಪಡೆಗೆ ವಿರೋಧ

ಮದ್ದೂರು: ನಗರಸಭೆಗೆ ನಮ್ಮ ಗ್ರಾಮಗಳನ್ನು ಸೇರ್ಪಡೆಗೊಳಿಸಬಾರದು ಎಂದು ಆಗ್ರಹಿಸಿ ನಾಲ್ಕು ಗ್ರಾಮ ಪಂಚಾಯಿತಿಗಳ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಗುರುವಾರ ಪ್ರತಿಭಟನೆ ಮಾಡಿದರು.

ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿಯ ಕೆಲ ಗ್ರಾಮಸ್ಥರು ರೈತ ಹೋರಾಟಗಾರರಾದ ಸುನಂದಾ ಜಯರಾಂ ನೇತೃತ್ವದಲ್ಲಿ ಕೈಗೆ ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟಗಳನ್ನು ಹಿಡಿದು ನಮ್ಮ ಗ್ರಾಮ ನಮ್ಮ ಪಂಚಾಯಿತಿ, ನಗರಸಭೆಗೆ ಸೇರ್ಪಡೆ ಬೇಡ ಎಂದು ಘೋಷಣೆಗಳನ್ನು ಕೂಗಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಈ ಹಿಂದೆ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಬಾರದು ಎಂದು ತಾಲೂಕು ಕಚೇರಿ ಸೇರಿದಂತೆ ಸಂಬಂಧಪಟ್ಟ ಸ್ಥಳೀಯ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೆವು. ಸೇರ್ಪಡೆಗೊಂಡರೆ ಗ್ರಾಮೀಣ ಕೃಪಾಂಕ, ನರೇಗಾ ಯೋಜನೆ ಕೈ ತಪ್ಪುವುದರ ಜತೆಗೆ ಆಸ್ತಿ ತೆರಿಗೆ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತದೆ ಎಂದು ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಚರ್ಚಿಸುವುದಾಗಿ ಶಾಸಕ ಕೆ.ಎಂ.ಉದಯ್ ತಿಳಿಸಿದ್ದರೂ ನಂತರ 4 ಗ್ರಾಮಗಳ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದು ಚರ್ಚಿಸದೆ ಏಕಾಏಕಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯಪತ್ರದಲ್ಲಿ ಘೋಷಣೆಯಾಗಿರುವ 4 ಗ್ರಾಪಂಗಳ ಗ್ರಾಮಗಳ ಹೆಸರನ್ನು ಕೂಡಲೇ ಕೈಬಿಡಲು ಶಿಫಾರಸು ಮಾಡಬೇಕು. ಶಾಸಕರೇ ಈ ಹಿಂದೆ ದೂರವಾಣಿಯಲ್ಲಿ ಮಾತನಾಡಿದಾಗ ವಾಪಸ್ ತೆಗೆಸುತ್ತೇನೆ ಎಂದು ಭರವಸೆ ನೀಡಿದಂತೆ ನಡೆದುಕೊಳ್ಳಬೇಕು. ಈ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡಲಾಗುತ್ತಿದೆ ಎಂದರು.

ಮುಖಂಡರಾದ ಲಿಂಗಪ್ಪಾಜಿ, ಗೊರವನಹಳ್ಳಿ ಪ್ರಸನ್ನ, ಸೋಮನಹಳ್ಳಿ ಸತೀಶ್, ಜಿ.ಎ.ಶಂಕರ್, ಪುರುಷೋತ್ತಮ್, ಕೃಷ್ಣ, ಸಿದ್ದರಾಜು, ರಾಮಕೃಷ್ಣ, ನವೀನ್, ವೀರಪ್ಪ, ಸಂತೋಷ್, ಗೌರಮ್ಮ ಇದ್ದರು.