ರಾಮನಗರ : ನಗರಸಭೆ ನೂತನ ಅಧ್ಯಕ್ಷರಾಗಿ ಕೆ.ಶೇಷಾದ್ರಿ ಮತ್ತು ಉಪಾಧ್ಯಕ್ಷರಾಗಿ ಅಯಿಷಾ ಬಾನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಶೇಷಾದ್ರಿ ಮತ್ತು ಆಯಿಷಾ ಬಾನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಬಿನೋಯ್ ಚುನಾವಣಾ ಶಾಸ್ತ್ರ ಪೂರ್ಣಗೊಳಿಸಿ, ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನಡೆಯದ ಕಮಾಲ್ : ಈ ಮೊದಲೇ ನಿರ್ಧಾರ ಮಾಡಿಕೊಂಡಂತೆ ಕಾಂಗ್ರೆಸ್‌ನಲ್ಲಿ ಎಲ್ಲವೂ ನಡೆದು ಹೋಯಿತು. ಅಧ್ಯಕ್ಷ ಸ್ಥಾನಕ್ಕೆ ಶೇಷಾದ್ರಿ ಹೊರತುಪಡಿಸಿ ಮತ್ಯಾರಾದರೂ ನಾಮಪತ್ರ ಸಲ್ಲಿಸಬಹುದು ಎನ್ನುವ ಲೆಕ್ಕಾಚಾರೂ ಇತ್ತು. ಆದರೆ, ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಕಾಂಗ್ರೆಸ್‌ನ ಎಲ್ಲ ಸದಸ್ಯರು ಒಟ್ಟಾಗಿ ಕೆ.ಶೇಷಾದ್ರಿ ಅವರು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟರು. ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶೇಷಾದ್ರಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯಿಷಾ ಬಾನು ನಾಮಪತ್ರ ಸಲ್ಲಿಕೆ ಮಾಡಿದರು. ಅಂತಿಮವಾಗಿ ನಾಮಪತ್ರ ಪರಿಶೀಲನೆ ಸಮಯದ ನಂತರ ಅಧಿಕೃತವಾಗಿ ಆಯ್ಕೆಯನ್ನು ಪ್ರಕಟಿಸಿ ಚುನಾವಣಾಧಿಕಾರಿ ತೆರಳಿದರು. ಈ ವೇಳೆ ತಹಸೀಲ್ದಾರ್ ತೇಜಶ್ವಿನಿ, ನಗರಸಭೆ ಆಯುಕ್ತ ಡಾ.ಜಯಣ್ಣ ಮುಂತಾದವರು ಇದ್ದರು.
ಕಾರ್ಯಾಚರಣೆಗೆ ಇಳಿಯದ ಜೆಡಿಎಸ್
ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಪರಸ್ಥಿತಿಯ ಲಾಭವನ್ನು ಪಡೆದುಕೊಳ್ಳುವ ಹವಣಿಕೆಯಲ್ಲಿ ಜೆಡಿಎಸ್ ಇತ್ತು. ಆದರೆ, ಅಂತಹ ಯಾವುದೇ ಬೆಳವಣಿಗೆ ನಡೆಯದ ಹಿನ್ನೆಲೆಯಲ್ಲಿ ಜೆಡಿಎಸ್ ಚುನಾವಣೆ ಪ್ರಕ್ರಿಕೆಯಲ್ಲಿ ಪಾಲ್ಗೊಂಡಿತಾದರೂ ನಾಮಪತ್ರ ಸಲ್ಲಿಕೆ ಮಾಡುವ ಸಾಹಸಕ್ಕೆ ಕೈ ಹಾಕಲೇ ಇಲ್ಲ. ಇದರೊಂದಿಗೆ ಎಲ್ಲವೂ ಯಾವುದೇ ಅಡೆತಡೆ ಇಲ್ಲದಂತೆ ನಡೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ನೂತನ ಅಧ್ಯಕ್ಷರಿಗೆ ಶುಭಾಷಯ ತಿಳಿಸಿ ತೆರಳಿದರು.
ಸಂಭ್ರಮಾಚರಣೆ: ಅಧ್ಯಕ್ಷರ ಆಯ್ಕೆಗೂ ಮುನ್ನವೇ ರಾಮನಗರ ನಗರದ ತುಂಬೆಲ್ಲಾ ಕೆ.ಶೇಷಾದ್ರಿ ಅಭಿಮಾನಿಗಳು ಫ್ಲೆಕ್ಸ್ ಬ್ಯಾನರ್‌ಗಳನ್ನು ಕಟ್ಟುವ ಮೂಲಕ ನೂತನ ಅಧ್ಯಕ್ಷರಿಗೆ ಶುಭಾಷಯ ಕೋರಿದ್ದರು. ಅಲ್ಲದೆ, ಒಂದೆಡೆ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದರೆ ಅತ್ತ, ನೂರಾರು ಅಭಿಮಾನಿಗಳು ಹಾಗೂ ಬೆಂಬಲಿಗರು ನಗರಸಭೆ ಹೊರಗೆ ವಿವಿಧ ಕಲಾ ತಂಡಗಳೊಂದಿಗೆ ಸಂಭ್ರಮಿಸುತ್ತಿದ್ದರು. ನಂತರ ಪ್ರಕ್ರಿಕೆಯೆಗಳು ಮುಗಿದ ನಂತರ ಕಚೇರಿಯಿಂದ ಹೊರಗೆ ಬಂದ ಕೆ.ಶೇಷಾದ್ರಿ ಅವರಿಗೆ ಹೂವಿನ ಮಳೆ ಸುರಿಸುವ ಮೂಲಕ ಜೈ ಕಾರ ಕೂಗಿದರು.
ನಗರಸಭೆ ಸದಸ್ಯರು ಹಾಗೂ ಪಕ್ಷ ನಂಬಿಕೆ ಇಟ್ಟು ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆ. ನಗರದ ಜನತೆಯ ಸಂಕಷ್ಟಕ್ಕೆ ಸ್ಫಂಧಿಸುವ ಮೂಲಕ ಎಲ್ಲರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ. ಕೆ.ಶೇಷಾದ್ರಿ, ನಗರಸಭೆ ನೂತನ ಅಧ್ಯಕ್ಷ ರಾಮನಗರ