ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳಲ್ಲಿ ಆರೋಗ್ಯ ನಿರೀಕ್ಷಕರ ಕೊರತೆಯಿಂದ ವಿವಿಧ ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ನಿರಂತರವಾಗಿ ಸಮಸ್ಯೆಯಾಗುತ್ತಿದೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 30 ವಾರ್ಡ್‌ಗಳಿದ್ದು ಪ್ರಸ್ತುತ ಇಬ್ಬರು ಹಿರಿಯ ಆರೋಗ್ಯ ನಿರೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಮತ್ತೊಬ್ಬರನ್ನು ಆರೋಗ್ಯ ಇಲಾಖೆಯಿಂದ 3 ದಿನಗಳು ನಿಯೋಜನೆ ಮಾಡಲಾಗಿದೆ. ಅದರಂತೆ 3 ಜನ ಆರೋಗ್ಯ ನಿರೀಕ್ಷಕರು ಕೆಲಸ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಇನ್ನು 3 ಆರೋಗ್ಯ ನಿರೀಕ್ಷಕರ ಹುದ್ದೆಗಳು ಖಾಲಿಯಾಗಿದ್ದು, ಆರೋಗ್ಯ ನಿರೀಕ್ಷಕರ ಕೊರತೆಯಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈಗ ಇರುವ ಒಬ್ಬ ಆರೋಗ್ಯ ನಿರೀಕ್ಷಕರಿಗೆ 10 ವಾರ್ಡ್‌ಗಳ ಜವಾಬ್ದಾರಿಯನ್ನು ನೀಡಲಾಗಿದ್ದು, ಸ್ವಚ್ಛತೆ, ಕುಡಿಯುವ ನೀರು ಹಾಗೂ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸಮಸ್ಯೆಯಾಗುತ್ತಿದೆ. ಆರೋಗ್ಯ ನಿರೀಕ್ಷಕರ ಕೊರತೆಯಿಂದ ನಿತ್ಯವೂ ಕಸ ವಿಲೇವಾರಿ ಮಾಡುವುದು ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಹಲವಾರು ವಾರ್ಡ್‌ಗಳಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪದೇ ಪದೇ ಉಂಟಾಗುತ್ತಿದ್ದು, ಸದ್ಯಕ್ಕೆ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರು ಸೂಕ್ತ ರೀತಿಯಲ್ಲಿ ಬಡಾವಣೆಗಳ ನಿವಾಸಿಗಳಿಗೆ ಸ್ಪಂದಿಸುವುದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ನಗರಸಭೆಯಲ್ಲಿ ಖಾಲಿ ಉಳಿದಿರುವ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ನಗರದ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಒದಗಿಸುವ ಸಂಬಂಧ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರಿಗೆ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮೇಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಕೊಳ್ಳೇಗಾಲ ನಗರಸಭೆಯಲ್ಲೂ ಕೊರತೆ:
ಜಿಲ್ಲೆಯ ವಾಣಿಜ್ಯ ಕೇಂದ್ರವಾಗಿರುವ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 30 ವಾರ್ಡ್‌ಗಳಿದ್ದು, ಪ್ರಸ್ತುತ ಇಬ್ಬರು ಹಿರಿಯ ಆರೋಗ್ಯ ನಿರೀಕ್ಷಕರು ಮತ್ತು ಒಬ್ಬರು ಕಿರಿಯ ಆರೋಗ್ಯ ನಿರೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲೂ ಕೂಡ 3 ಆರೋಗ್ಯ ನಿರೀಕ್ಷಕರ ಹುದ್ದೆಗಳು ಖಾಲಿ ಇದ್ದು, 10 ವಾರ್ಡ್‌ಗಳ ಜವಾಬ್ದಾರಿಯನ್ನು ಓರ್ವ ಆರೋಗ್ಯ ನಿರೀಕ್ಷಕ ನೋಡಿಕೊಳ್ಳಬೇಕಿದೆ. ಪರಿಣಾಮವಾಗಿ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು, ಕಸ ವಿಲೇವಾರಿ ಹಾಗೂ ಇನ್ನಿತರೆ ಮೂಲಸೌಕರ್ಯಗಳನ್ನು ಸೂಕ್ತ ರೀತಿಯಲ್ಲಿ ಕಲ್ಪಿಸಲು ಸಮಸ್ಯೆಯಾಗುತ್ತಿದೆ.
ಕಸವಿಲೇವಾರಿಯದ್ದೇ ತಲೆನೋವು:
ಚಾ.ನಗರ ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ವಾರ್ಡ್‌ಗಳಲ್ಲಿ 3-4 ದಿನಗಳಾದರೂ ಕಸ ವಿಲೇವಾರಿ ಮಾಡುವುದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹಲವಾರು ವಾರ್ಡ್‌ಗಳಿಗೆ ಕಸ ವಿಲೇವಾರಿ ವಾಹನವೇ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಕೆಲವು ಬಡಾವಣೆಗಳಲ್ಲಿ ಚರಂಡಿಗಳಲ್ಲಿ ಕಸ ಎತ್ತುತ್ತಾರೆ ಹೊರತು, ಅದನ್ನು ವಿಲೇವಾರಿ ಮಾಡದೇ ಸಮಸ್ಯೆಯಾಗುತ್ತಿದೆ. ಕೆಲವು ಬಡಾವಣೆಗಳಿಗೆ ಸೂಕ್ತ ಸಮಯಕ್ಕೆ ಕುಡಿಯುವ ನೀರು ಬರುವುದಿಲ್ಲ ಎಂದು ನಿವಾಸಿಗಳು ಆಗಾಗ್ಗೆ ಅಳುವು ತೋಡಿಕೊಳ್ಳುತ್ತಲೇ ಇದ್ದಾರೆ. ಕಸ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆರೋಗ್ಯ ನಿರೀಕ್ಷಕರಿಗೆ ಕರೆ ಮಾಡಿದರೇ ಸ್ವೀಕಾರ ಮಾಡುವುದಿಲ್ಲ ಎಂಬ ಆರೋಪಗಳು ಕೂಡ ನಿತ್ಯವೂ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ನಿರೀಕ್ಷಕರ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಇನ್ನಿತರೆ ಹುದ್ದೆಗಳು ಖಾಲಿ:
ಚಾ.ನಗರ ಸಭೆಯಲ್ಲಿ ಆರೋಗ್ಯ ನಿರೀಕ್ಷಕರ ಕೊರತೆಯಂತೆ ಇನ್ನಿತರೆ ಹುದ್ದೆಗಳು ಖಾಲಿ ಇದ್ದು, ಸಿಬ್ಬಂದಿಗಳ ಕೊರತೆಯಿಂದ ಹಲವಾರು ಕೆಲಸ ಕಾರ್ಯಗಳು ಚುರುಕಾಗಿ ನಡೆಯುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಲೇ ಇದ್ದಾರೆ. ಕಂದಾಯ ವಿಭಾಗದಲ್ಲಿ ಕಂದಾಯ ಅಧಿಕಾರಿ ಹುದ್ದೆ, ಕಂದಾಯ ನಿರೀಕ್ಷರ ಹುದ್ದೆಗಳು, ಬಿಲ್‌ಕಲೆಕ್ಟರ್‌ಗಳ ಹುದ್ದೆ ಖಾಲಿಇದೆ. ತಾಂತ್ರಿಕ ವಿಭಾಗದಲ್ಲೂ 1 ಸಹಾಯಕ ಕಾರ್ಯಪಾಲಕ ಅಭಿಯಂತರರು, 1 ಸಹಾಯಕ ಅಭಿಯಂತರರು, 3 ಕಿರಿಯ ಅಭಿಯಂತರರು ಇರಬೇಕು. ಆದರೇ ಅದರಲ್ಲೂ ಕೂಡ 3 ಹುದ್ದೆಗಳು ಖಾಲಿ ಇದೆ. ಒಟ್ಟಾರೆಯಾಗಿ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಹೊರಗುತ್ತಿಗೆ ನೌಕರರ ಹಾವಳಿಯಿಂದ ಸಾರ್ವಜನಿಕರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ.
ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಲವಾರು ಕೆಲಸ ಕಾರ್ಯಗಳು ವೇಗವಾಗಿ ಆಗುವುವಿಲ್ಲ. ಇರುವ ಸಿಬ್ಬಂದಿಗಳಲ್ಲೇ ನಗರದ ಸ್ವಚ್ಛತೆ ಮತ್ತು ಇನ್ನಿತರೆ ಕೆಲಸಕಾರ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಸಿಬ್ಬಂದಿಗಳ ಕೊರತೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ.
-ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ
ನಗರಸಭೆಯಲ್ಲಿ ಆರೋಗ್ಯ ನಿರೀಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳ ಕೊರತೆಯಿಂದ ಕೆಲಸಕಾರ್ಯಗಳು ವಿಳಂಬವಾಗುತ್ತಿದೆ. ನಗರದಲ್ಲಿ ಕಸವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿದೆ. ಆರೋಗ್ಯ ನಿರೀಕ್ಷಕರು ನಿವಾಸಿಗಳ ಕರೆಗಳನ್ನು ಸ್ವೀಕರಿಸುವುದಿಲ್ಲ. ಹೊರಗುತ್ತಿಗೆ ನೌಕರರು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಗರಸಭೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿಮಾಡಿ, ಸಾರ್ವಜನಿಕರಿಗೆ ಅನುಕೂಲಕಲ್ಪಿಸಬೇಕು.
-ಎನ್.ಲೋಹಿತ್, ರಾಮಸಮುದ್ರ ಬಡಾವಣೆ, ಚಾಮರಾಜನಗರ