ಹುಣಸೂರು: ಹುಣಸೂರು ನಗರಸಭೆಯ ಸಭಾಂಗಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನಿಟ್ಟಿರುವುದು ರಾಜ್ಯದಲ್ಲೇ ಒಂದು ಐತಿಹಾಸಿಕ ತೀರ್ಮಾನ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಬಣ್ಣಿಸಿದ್ದಾರೆ.
ಯಾವುದೇ ದಲಿತ ಸಂಘಟನೆ ಹುಣಸೂರು ನಗರಸಭೆ ಸಭಾಂಗಣಕ್ಕೆ ಅಂಬೇಡ್ಕರ್ ಹೆಸರಿಡಿ ಎಂದು ಮನವಿ ಕೊಟ್ಟಿಲ್ಲ. ಸಭೆ, ಸಮಾರಂಭಗಳಲ್ಲಿ ವಿಷಯ ಮಂಡಿಸಿಲ್ಲ, ಪ್ರತಿಭಟನೆ ಮಾಡಿಲ್ಲ. ಆದರೂ ತಾಲೂಕಿನ ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ನಗರಸಭೆಯ 31 ಸದಸ್ಯರು, 5 ಜನ ನಾಮನಿರ್ದೇಶನ ಸದಸ್ಯರು, ನಗರಸಭಾ ಆಯುಕ್ತರೂ ಎಲ್ಲರೂ ಸೇರಿ ಒಮ್ಮತದಿಂದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಅಂಬೇಡ್ಕರ್ ಹೆಸರನ್ನಿಟ್ಟಿರುವುದು ತಾಲೂಕಿನ ದಲಿತ ಸಮುದಾಯದಲ್ಲಿ ಸಂತೋಷದ ಜತೆಗೆ ಆಶ್ಚರ್ಯವಾಗುತ್ತಿದೆ. ಇಂತಹ ಮಹತ್ವವಾದ ತೀರ್ಮಾನವನ್ನು ನೋಡಿದರೆ ಇದಕ್ಕೆ ಕಾರಣೀಭೂತರಾದ ಎಲ್ಲರೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮನೋಭಾವನೆಯನ್ನು ಹೊಂದಿರುವುದು ಸಾಕ್ಷಿಯಾಗಿದೆ. ಈ ಸಭಾಂಗಣವು ಬರೀ ಸಭಾಂಗಣವಾಗದೆ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಬಡವರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಕೇಂದ್ರವಾಗಬೇಕು. ಹುಣಸೂರು ನಗರದ ಬಡ ಜನರ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿ ಬಡವರಿಗೆ ನ್ಯಾಯ ಸಿಗುವ ಮಂದಿರವಾಗಬೇಕು. ಆಗ ಮಾತ್ರ ಅಂಬೇಡ್ಕರ್ ಅವರ ಹೆಸರಿನ್ನು ಇಟ್ಟಿರುವ ಈ ಸಭಾಂಗಣಕ್ಕೆ ಒಂದು ಅರ್ಥ ಬರಲಿದೆ. 12ನೇ ಶತಮಾನದ ಬಸವಣ್ಣನ ಅನುಭವ ಮಂಟಪದ ಪರಿಕಲ್ಪನೆ ಈ ಸಭಾಂಗಣದಲ್ಲಿ ನಡೆಯಲು ಯಾವ ಸಮುದಾಯಗಳಿಗೆ ಅವಕಾಶವಿಲ್ಲವೋ, ದನಿಯಿಲ್ಲದ ದಿಕ್ಕಿಲ್ಲದ ಜನರ, ಅವಮಾನಿತರ ಸೌಲಭ್ಯ ವಂಚಿತರಿಗೆ ಈ ಸಭಾಂಗಣ ಒಂದು ಧ್ವನಿಯಾಗಿ ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸಬೇಕು.
ಅಂಬೇಡ್ಕರ್ ಹೆಸರಿನ ಸಭಾಂಗಣಕ್ಕೆ ಸಭೆಯಲ್ಲಿ ವಿಷಯ ಮಂಡಣೆ ಮಾಡಿದ ನಗರಸಭಾ ಸದಸ್ಯ ಕೃಷ್ಣರಾಜಗುಪ್ತರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಇಂತಹ ಬದಲಾವಣೆಯನ್ನು ಮಾಡಲು ಸಹಕರಿಸಿದ ಶಾಸಕ ಮತ್ತು ಎಲ್ಲ ಸದಸ್ಯರ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮೆಚ್ಚಲೇಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.