ಜಿ.ಕೆ.ಸುಗ್ಗರಾಜು ನೆಲಮಂಗಲ
ನಗರಸಭೆ ಸದಸ್ಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮಾಡಿದ್ದ ಸರ್ಕಾರದ ಆದೇಶ ಹಾಗೂ ಚುನಾಯಿತ ಸದಸ್ಯರ ನಿಲುವನ್ನು ಎತ್ತಿಹಿಡಿದಿದ್ದು, ಕೊನೆಗೂ ಸದಸ್ಯರ ಐದೂವರೆ ವರ್ಷದ ಹೋರಾಟಕ್ಕೆ ಜಯ ದೊರೆತಂತಾಗಿದೆ.
ಮುನಿಸಿಪಲ್ ಕಾಯ್ದೆಯಡಿ ಸರ್ಕಾರ ನಿಯಮಾನುಸಾರ ಮೇಲ್ದರ್ಜೆಗೇರಿಸಿರುವ ಸದಸ್ಯರನ್ನು ಒಳಗೊಂಡಂತೆ ವಿಲೀನಗೊಂಡಿರುವ ಹೊಸ ಪ್ರದೇಶಗಳಿಗೆ ಪುರಸಭೆ ಕಾಯ್ದೆ ಕಲಂ 360(ಡಿ) ಅಡಿ, ಹೆಚ್ಚುವರಿ ಕೌನ್ಸಿಲರ್‌ಗಳನ್ನು ನೇಮಿಸಿಕೊಂಡು, ನಗರಸಭೆಗೆ ಹೊಸ ಆಡಳಿತ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ 2021ರ ಅ.28ರಂದು ಮಧ್ಯಂತರ ಆದೇಶ ಹೊರಡಿಸಿದ್ದರು. ಮಧ್ಯಂತರ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಹೃಶಿಕೇಶ್‌ರಾಯ್ ಮತ್ತು ಎವಿಎನ್.ಬಾಠಿ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಪ್ರಸ್ತುತ ಇರುವ ಅಡಳಿತ ಮಂಡಳಿ ಅವಧಿಯು 2024ರ ಜೂನ್‌ಗೆ ಅಂತ್ಯವಾಗಲಿದ್ದು, ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪ್ರತಿವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಮುಂದಿನ 2027ರ ಜೂನ್‌ವರೆಗೆ ಪ್ರಸ್ತುತ ಅಡಳಿತ ಮಂಡಳಿಗೆ ಅಧಿಕಾರ ನೀಡುವಂತೆ ಸೋಮವಾರ ಆದೇಶ ನೀಡಿದ್ದು, ಸದಸ್ಯರಲ್ಲಿ ಇದ್ದ ಆತಂಕ ದೂರವಾಗಿದೆ.
ಏನಿದು ಪ್ರಕರಣ?: ನೆಲಮಂಗಲ ಪುರಸಭೆಗೆ 2019ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ 13 ಕಾಂಗ್ರೆಸ್ 7 ಬಿಜೆಪಿಯ ಇಬ್ಬರು, ಒಬ್ಬ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಸರ್ಕಾರ 2019ರ ಡಿ.26ರಂದು ಆದೇಶ ಹೊರಡಿಸಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿತ್ತು. ಬಳಿಕ ಮುನಿಸಿಪಲ್ ಕಾಯ್ದೆಯಡಿ ಪುರಸಭೆಯ ಚುನಾಯಿತ ಸದಸ್ಯರನ್ನೇ ನಗರಸಭಾ ಸದಸ್ಯರಾಗಿ
ಮೇಲ್ದರ್ಜೆಗೇರಿಸಿತ್ತು. ಆದರೆ, ಸರ್ಕಾರದ ಈ ಕ್ರಮ ಪ್ರಶ್ನಿಸಿ ಕೆಲವರು
ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಹಾಗೂ ದ್ವಿಸದಸ್ಯ ನ್ಯಾಯಪೀಠ ವಿಲೀನಗೊಂಡಿರುವ ಹೊಸ ಪ್ರದೇಶಗಳು ಒಳಗೊಂಡಂತೆ 2 ತಿಂಗಳ ಒಳಗಾಗಿ ನೂತನ ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿತ್ತು. ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಚುನಾಯಿತ ಸದಸ್ಯರು ಹಾಗೂ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ನ್ಯಾಯಪೀಠ, ವಾದ, ಪ್ರತಿವಾದಗಳನ್ನು ಆಲಿಸಿ 2021ರ ಅ.28ರಂದು ಆದೇಶ ಹೊರಡಿಸಿದೆ. ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಮಾತ್ರಕ್ಕೆ ಚುನಾಯಿತರಾಗಿರುವ ಸದಸ್ಯರ ಅಧಿಕಾರಾವಧಿಯನ್ನು ಮೊಟಕುಗೊಳಿಸಿ, ಹೊಸದಾಗಿ ಚುನಾವಣೆ ನಡೆಸಬೇಕು ಎಂಬ ಬಗ್ಗೆ ಯಾವುದೇ ನಿಖರ ಕಾಯ್ದೆ ಇಲ್ಲವಾಗಿದೆ. ಇದನ್ನು ಮನಗಂಡು 2 ವಾರದೊಳಗೆ ಪುರಸಭೆ ಕಾಯ್ದೆಯಡಿ ಮೇಲ್ದರ್ಜೆಗೇರಿರುವ ಚುನಾಯಿತ ಸದಸ್ಯರನ್ನು ಮುಂದುವರಿಸಿ, ವಿಲೀನಗೊಂಡಿರುವ ಹೊಸ ಪ್ರದೇಶಗಳಿಗೆ ಕಲಂ 360(ಡಿ) ಅಡಿ ಹೆಚ್ಚುವರಿ ಕೌನ್ಸಿಲರ್‌ಗಳನ್ನು ನೇಮಿಸಿ, ನಗರಸಭೆ ಆಡಳಿತ ಮಂಡಳಿ ರಚಿಸುವಂತೆ ಹೇಳಿದ್ದು ಚುನಾಯಿತ ಸದಸ್ಯರಲ್ಲಿ ನಿರಾಳತೆ ತಂದಿತ್ತು. ಡಿ.6ಕ್ಕೆ ಅಡಳಿತ ಮಂಡಳಿ ರಚನೆಯಾಗಿ ಕೇವಲ ಎರಡೂವರೆ ವರ್ಷ ಮೊದಲ ಅವಧಿ ಮಾತ್ರ ಪೂರ್ಣಗೊಂಡಿದ್ದು, ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಬೇಕಾದ ಈ ಸಂದರ್ಭದಲ್ಲಿ ಪ್ರತಿವಾದಿಗಳು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿದಾರರ ಪರವಾಗಿ ಸುಪ್ರೀಂಕೋರ್ಟ್ ನೀಡಿದ್ದ ಮದ್ಯಂತರ ಆದೇಶವನ್ನು ಮರು ಪರಿಶೀಲಿಸಿ, ಈಗಿರುವ ಅಡಳಿತ ಮಂಡಳಿಯನ್ನು ವಜಾಗೊಳಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದರು. ಪ್ರತಿವಾದಿಗಳ ವಾದವನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಅಂತಿಮವಾಗಿ ಸದಸ್ಯರ ಹಾಗೂ ಸರ್ಕಾರದ ನಿಲುವನ್ನೇ ಎತ್ತಿಹಿಡಿದು ಆದೇಶ ನೀಡಿದೆ.
ಆದೇಶ ಸ್ವಾಗತಾರ್ಹ: ನಗರಸಭೆೆ ಚುನಾಯಿತ ಸದಸ್ಯರ ಅಧಿಕಾರಾವಧಿ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಅದೇಶವನ್ನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿದಂತಾಗಿದೆ. ಇದರ ನಡುವೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಇರುವ ಚುನಾಯಿತ ಸದಸ್ಯರ ಅಧಿಕಾರವನ್ನು ಮೊಟುಕುಗೊಳಿಸಲು ಯತ್ನಿಸಿದ್ದ ಕೆಲವರಿಗೆ ಸುಪ್ರೀಂ ಕೋರ್ಟ್ ನ್ಯಾಯದ ಪಾಠ ಹೇಳಿದೆ. ನಗರಸಭೆ ಅಭಿವೃದ್ಧಿಗಾಗಿ ಚುನಾಯಿತ ಸದಸ್ಯರ ಜತೆಯಲ್ಲಿದ್ದು, ಸಹಕರಿಸುವುದಾಗಿ ಶಾಸಕ ಎನ್.ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದರು.
ಸಂವಿಧಾನದ ಆಶಯ ಎತ್ತಿಹಿಡಿಯುವ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮಾನುಸಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 23 ಮಂದಿಯ ಒಗ್ಗಟ್ಟಿನ ಹೋರಾಟಕ್ಕೆ ಸುಪ್ರೀಂಕೋರ್ಟ್ ನ್ಯಾಯ ಒದಗಿಸಿದ್ದು, ಸದಸ್ಯರಲ್ಲಿ ಸಂತಸ ಉಂಟು ಮಾಡಿದೆ. ಎನ್.ಪಿ.ಹೇಮಂತಕುಮಾರ್ ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪ್ರಜಾಪ್ರತಿನಿಧಿ ಕಾಯ್ದೆಗೆ ಹಾಗೂ ಐದೂವರೆ ವರ್ಷಗಳ ಕಾಲ ಸದಸ್ಯರು ಹಾಗೂ ಸರ್ಕಾರ ನಡೆಸಿದ್ದ ನ್ಯಾಯಬದ್ಧ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮುಂದಿನ ಎರಡೂವರೆ ವರ್ಷಗಳ ಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಹಕಾರಿಯಾಗಲಿದೆ. ಸಿ.ಪ್ರದೀಪ್ ನಗರಸಭೆ ಸದಸ್ಯ, ವಕೀಲ