ಜಿಲ್ಲೆ

ನಗರಸಭೆ, ಪುರಸಭೆ ಚುನಾವಣೆ ಮುಂದೂಡಿಕೆ

ಚಿಕ್ಕಬಳ್ಳಾಪುರ : ನಗರಸಭೆ ಮತ್ತು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಹಿಡಿಯಲು ತುದಿಗಾಲಿನಲ್ಲಿ ನಿಂತಿದ್ದ ಆಕಾಂಕ್ಷಿಗಳಿಗೆ ಚುನಾವಣೆ ಮುಂದೂಡಿಕೆ ನಿರಾಸೆ ಮೂಡಿಸಿದೆ.

ಗೌರಿಬಿದನೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಿ, ಚುನಾವಣೆ ನಡೆಸಲು ಸರ್ಕಾರ ಆದೇಶಿಸಿರುವುದರ ನಡುವೆ ಮೀಸಲಾತಿ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ. ಸಿಂಧನೂರಿನಿಂದ ಸಲ್ಲಿಕೆಯಾದ ದಾವೆಯ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿದೆ. ಮತ್ತೊಂದೆಡೆ ಕರೊನಾ ಹಿನ್ನೆಲೆಯಲ್ಲಿ ಮಾ.31 ರ ತನಕ ಸಭೆ ಸಮಾರಂಭ, ಚುನಾವಣಾ ಪ್ರಕ್ರಿಯೆ ಮುಂದೂಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಜಿಲ್ಲೆಯ 3 ನಗರಸಭೆ ಮತ್ತು 1 ಪುರಸಭೆ ವಾರ್ಡ್‌ಗಳಿಗೆ ಚುನಾವಣೆ ನಡೆದು ಒಂದೂವರೆ ವರ್ಷ ಮತ್ತು ಚಿಕ್ಕಬಳ್ಳಾಪುರ ನಗರಸಭೆಗೆ ಚುನಾವಣೆ ನಡೆದು 2 ತಿಂಗಳು ಕಳೆದಿದೆ. ಇದರ ನಡುವೆ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಪ್ರಬಲ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಬಂದಿತ್ತು. ರಾಜಕೀಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಹಲವು ಸಭೆಗಳನ್ನು ನಡೆಸಿ, ಯೋಜನೆಗಳನ್ನು ರೂಪಿಸಿದ್ದವು. ಚುನಾವಣಾ ಮುಹೂರ್ತ ನಿಗದಿಯೊಂದೇ ಬಾಕಿ ಇತ್ತು. ಆದರೆ, ಇದೀಗ ಮೀಸಲಾತಿ ವಿವಾದ ಬಗೆಹರಿಯುವವರೆಗೂ ಕಾಯುವಂತಾಗಿದೆ.

ಕೆಲವರಿಗೆ ಖುಷಿ, ಕೆಲವರಿಗೆ ಪೀಕಲಾಟ : ಸ್ವಪಕ್ಷೀಯ ಮತ್ತು ಅನ್ಯ ಪಕ್ಷೀಯ ಸದಸ್ಯರ ಒಗ್ಗೂಡಿಸುವಿಕೆಯ ಮೂಲಕ ಬಲ ಹೆಚ್ಚಿಸಿಕೊಂಡಿದ್ದ ಪಕ್ಷಗಳಿಗೆ ಪೀಕಲಾಟ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷಾಂತರ, ಅಧಿಕಾರದ ಒಳ ಒಪ್ಪಂದ ಸೇರಿ ನಾನಾ ಕಾರಣಗಳಿಂದ ಎಲ್ಲ ಉಲ್ಟಾಪಲ್ಟಾ ಆಗುವುದು ತಪ್ಪಲು ಆದಷ್ಟು ಬೇಗ ಚುನಾವಣೆ ನಡೆದರೆ ಒಳ್ಳೆಯದು ಎಂಬ ಗೊಣಗಾಟ ಕೇಳಿ ಬರುತ್ತಿದೆ. ಮತ್ತೊಂದೆಡೆ ಶತಾಯ ಗತಾಯ ಹೆಚ್ಚಿನ ಸ್ಥಾನಗಳ ಗೆಲುವಿಗೆ ಅಬ್ಬರದ ಪ್ರಚಾರ ಕೈಗೊಂಡರೂ ನಿರಾಸೆಯ ಲಿತಾಂಶ ಕಂಡವರಿಗೆ ಮಾತ್ರ ಸಂತಸವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಬಹುತೇಕ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಡಾ ಕೆ.ಸುಧಾಕರ್ ನಗರಸಭೆಯನ್ನೂ ಹಿಡಿತದಲ್ಲಿಟ್ಟುಕೊಳ್ಳಲು ಬಯಸಿದ್ದರು. ಆದರೆ, ಕಾಂಗ್ರೆಸ್ 16, ಜೆಡಿಎಸ್ 2 ಸೇರಿ ಮೈತ್ರಿ ಬಳಗ 18 ಸ್ಥಾನಗಳೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಖಾತ್ರಿಯಾಗಿದೆ. ಬಿಜೆಪಿ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದು ಆಡಳಿತ ಚುಕ್ಕಾಣಿ ಹಿಡಿಯುವುದರಿಂದ ದೂರವಾಗಿದೆ. ಇದೀಗ ಚುನಾವಣಾ ವಿಳಂಬವು ಮೈತ್ರಿಯಲ್ಲಿ ಆಪರೇಷನ್ ಕಮಲ ಆತಂಕ ಹೆಚ್ಚಿಸಿದೆ.

ಚುನಾವಣೆ ತಡೆ ನೀಡದಿರಲು ಮನವಿ? : ಮೀಸಲಾತಿ ವಿವಾದ ದಾವೆ ಸಲ್ಲಿಕೆಯಾಗಿರುವ ಸಿಂಧನೂರು ಹೊರತುಪಡಿಸಿ, ಉಳಿದೆಡೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆಯ್ಕೆಗೆ ತಡೆ ನೀಡದಿರಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಮುಂದಾಗಿದ್ದಾರೆ.ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ನಾಯಕರ ನೇತೃತ್ವದಲ್ಲಿ ಬುಧವಾರ ಭೇಟಿ ಮಾಡಿದ ಚಿಕ್ಕಬಳ್ಳಾಪುರ ನಗರಸಭೆಯ ಕಾಂಗ್ರೆಸ್ ಸದಸ್ಯರು ಮೀಸಲಾತಿ ವಿವಾದ ಮತ್ತು ನ್ಯಾಯಾಲಯದ ಆದೇಶದ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಮೀನಾಕ್ಷಿ ಮಿಲ್ಟನ್ ವೆಂಕಟೇಶ್, ಕಣಿತಹಳ್ಳಿ ವೆಂಕಟೇಶ್ ಮತ್ತು ಸತೀಶ್ ವಕಲಾತ್ತು ಹಾಕಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಇನ್ನೂ ಯಾವುದೇ ಅಡೆತಡೆಯಿಲ್ಲ ಎಂದುಕೊಳ್ಳುವಷ್ಟರಲ್ಲಿ ತಕರಾರು ಕಂಡು ಬಂದಿದೆ. ಇದಕ್ಕೆ ಕರೊನಾ ಎಫೆಕ್ಟ್ ನೆಪ ಬೇರೆ. ಅನವಶ್ಯಕ ವಿಳಂಬ ಆಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ.

ಕಣಿತಹಳ್ಳಿ ವೆಂಕಟೇಶ್, ಅಧ್ಯಕ್ಷ ಆಕಾಂಕ್ಷಿ, ಚಿಕ್ಕಬಳ್ಳಾಪುರ