ಯಾದಗಿರಿ: ಸ್ಥಳೀಯ ನಗರಸಭೆಗೆ ಬಾಕಿ ಉಳಿದ ೧೩ ತಿಂಗಳ ಅಧಿಕಾರಕ್ಕಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಭಾರಿ ಪೈಪೋಟಿ ಬಿದ್ದಿದ್ದು, ನಂಬರ್ ಗೇಮ್ ಮೇಲೆ ಎಲ್ಲವೂ ಅವಲಂಬಿಸಿದೆ. ಜಿಲ್ಲೆಯ ಇಬ್ಬರು ಘಟಾನುಘಟಿ ನಾಯಕರಾಗಿದ್ದ ಡಾ.ವೀರಬಸವಂತರಡ್ಡಿ ಮುದ್ನಾಳ್ ಮತ್ತು ವೆಂಕಟರಡ್ಡಿ ಮುದ್ನಾಳ್ ಅವರ ಅನುಪಸ್ಥಿತಿ ಬಿಜೆಪಿಯನ್ನು ಕಾಡಿದರೆ, ಸ್ಥಳೀಯ ಶಾಸಕ ಮತ್ತು ಸಂಸದರ ಬಲ ಕಾಂಗ್ರೆಸ್‌ಗಿದೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ವಾರದಿಂದ ಆಕಾಂಕ್ಷಿಗಳು ತಮ್ಮ ರಾಜಕೀಯ ನಾಯಕರನ್ನು ಭೇಟಿ ಮಾಡಿ ಅವಕಾಶ ನೀಡುವಂತೆ ಕೋರುವ ಮೂಲಕ ಬೆಂಬಲಕ್ಕೆ ಬೇಕಾದ ಸದಸ್ಯರ ಮನವೊಲಿಸುವಲ್ಲಿ ನಿರತರಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ಮಹಿಳೆಗೆ ಮೀಸಲಿದೆ. ಸರಳ ಬಹುಮತದ ಬಿಜೆಪಿಗೆ ಟಕ್ಕರ್ ನೀಡಲು ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯುತ್ತಿದೆ. ಯಾವ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಬಾರದೆಂಬ ಜಿದ್ದಿಗೆ ಬಿದ್ದಿರುವ ಬಿಜೆಪಿ ತನ್ನ ಎಲ್ಲ ಸದಸ್ಯರನ್ನು ಸೋಮವಾರ ಸಂಜೆ ಒಂದೆಡೆ ಕರೆದು ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅತ್ತ ಕಾಂಗ್ರೆಸ್ ವೀಕ್ಷಕರಾಗಿ ಬಂದಿದ್ದ ಎಂಎಲ್‌ಸಿ ಜಗದೇವ ಗುತ್ತೇದಾರ್ ಪಕ್ಷದ ೧೧ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಈ ಸಭೆಗೆ ಇಬ್ಬರು ಸದಸ್ಯರು ಗೈರು ಆಗಿರುವುದು ನಾನಾ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಈ ಮಧ್ಯೆ ಜೆಡಿಎಸ್‌ನ ಜಯಮ್ಮ ಮಡ್ಡಿ ಕೂಡ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು, ಕಾಂಗ್ರೆಸ್‌ನಿAದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದು ೧೨ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಒಪ್ಪಿದಾಗ ಮಾತ್ರ ಕೈಗೂಡಲಿದೆ.