ಕೊಳ್ಳೇಗಾಲ: ಕಳೆದ ಒಂದು ತಿಂಗಳಿನಿಂದ ಸಮರ್ಪಕವಾಗಿ ನೀರು ಬಿಡದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯೆಯನ್ನು ಶಿವಕುಮಾರಸ್ವಾಮಿ ಬಡಾವಣೆ ನಿವಾಸಿಗಳು ಶನಿವಾರ ತರಾಟೆಗೆ ತೆಗೆದುಗೊಂಡರು.
ಶಿವಕುಮಾರಸ್ವಾಮಿ ಬಡಾವಣೆಗೆ ನಿವಾಸಿಗಳ ಸಮಸ್ಯೆ ಆಲಿಸಲು ಆಗಮಿಸಿದ್ದ ನಗರಸಭೆ ಆಯುಕ್ತ ರಾಜಣ್ಣ ಹಾಗೂ ವಾರ್ಡ್ ಸದಸ್ಯೆ ಸುಮಾ ಅವರ ಎದುರು ನಿವಾಸಿಗಳು ನಗರಸಭೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
19ನೇ ವಾರ್ಡ್‌ಗೆ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ವಾರಗಟ್ಟಲೆ ಕಸ ಬಿದ್ದಿದ್ದರೂ ಸ್ವಚ್ಛತೆ ಮಾಡುವುದಿಲ್ಲ. ರಸ್ತೆಗಳು ಮತ್ತು ಚರಂಡಿ ವ್ಯವಸ್ಥೆ ಮಾಡಿಲ್ಲ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗುತ್ತದೆ. ಮುಖ್ಯ ರಸ್ತೆಯಲ್ಲೇ ಯುಜಿಡಿ ಮ್ಯಾನ್ ಹೋಲ್‌ಗಳು ಬಾಯ್ತೆರೆದಿವೆ. 24/7 ಕುಡಿಯುವ ನೀರಿನ ಕಾಮಗಾರಿ ಮುಗಿದಿಲ್ಲ. ರಸ್ತೆ ಅಗೆದು ಪೈಪ್ ಹಾಕಿದ್ದರೂ ನಲ್ಲಿ ಅಳವಡಿಸಿಲ್ಲ. 1 ತಿಂಗಳಿಂದ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಕೆಲ ಬಾರಿ ರಾತ್ರಿ 10ಗಂಟೆ ಮೇಲೆ ನೀರು ಬಿಡುತ್ತಾರೆ. ನೀರಿಗಾಗಿ ಜಾಗರಣೆ ಮಾಡಬೇಕಿದೆ ಎಂದು ನಿವಾಸಿಗಳಾದ ನಾಗರಾಜು, ಗಾಯತ್ರಿ, ಲೋಕೇಶ್, ಭಾಗ್ಯವತಿ, ಮಂಜುನಾಥ್ ಇತರರು ದೂರಿದರು.
ನಿವಾಸಿ ನಾಗರಾಜು ಮಾತನಾಡಿ, ಶಿವರಾಜು ಎಂಬಾತ ಈ ಬಡಾವಣೆಯ ನೀರು ಗಂಟಿಯಾಗಿದ್ದು, ಮನಬಂದತೆ ನೀರು ಬಿಡುತ್ತಿದ್ದಾನೆ. ಈ ಬಡಾವಣೆಯಲ್ಲಿ ಮೂಲ ಸೌಕರ್ಯದ ಅವ್ಯವಸ್ಥೆ ತಾಂಡವವಾಡುತ್ತಿದೆ ಎಂದು ಅಕ್ರೋಶ ಹೊರಹಾಕಿದರು.
ಕ್ರಮ ವಹಿಸುವ ಭರವಸೆ: ಸಮಸ್ಯೆ ಆಲಿಸಿದ ನಗರಸಭೆ ಆಯುಕ್ತ ರಾಜಣ್ಣ ಪ್ರತಿಕ್ರಿಯಿಸಿ, ಈ ಬಡಾವಣೆಗೆ ನೀರು ಪೂರೈಸುವ ಸಂಬಂಧ ತಕ್ಷಣವೇ ಕ್ರಮವಹಿಸುತ್ತೇನೆ ಎಂದರು.
ವಾಲ್‌ಗಳು ಕೆಟ್ಟಿದ್ದ ಕಾರಣ ನೀರು ಸೂಕ್ತ ಸಮಯಕ್ಕೆ ಬಿಡಲು ಸಾಧ್ಯವಾಗಿಲ್ಲ. ದಿನಕ್ಕೆ 2 ಗಂಟೆ ಕಾಲ ನೀರು ಕೊಡುವ ವ್ಯವಸ್ಥೆ ಮಾಡಿಸುತ್ತೇನೆ. 24/7 ಕುಡಿಯುವ ನೀರಿನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತೇವೆ. ಇನ್ನೆರಡು ದಿನದಲ್ಲಿ ಸಕಾಲಕ್ಕೆ ನೀರು ನೀಡಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಸದಸ್ಯರಾದ ಸುಮಾ, ಪ್ರಕಾಶ್ ಶಂಕನಪುರ, ಬಡಾವಣೆ ನಿವಾಸಿಗಳಾದ ಮಂಜುನಾಥ್, ಮಹೇಶ್, ರವೀಶ್, ಶಿವಸ್ವಾಮಿ ಮತ್ತಿತರರಿದ್ದರು.