ರಾಣೆಬೆನ್ನೂರ: ಸ್ಥಳೀಯ ನಗರಸಭೆ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿಯಾಗಿ ರ್ಪಾಂಗ್ ಮಾಡಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಎದುರಾಗಿದೆ.
ನಗರಸಭೆ ಕಟ್ಟಡದ ಎದುರಿಗೆ ಹಾಗೂ ಪಕ್ಕದಲ್ಲಿ ದ್ವಿಚಕ್ರ ವಾಹನಗಳ ರ್ಪಾಂಗ್ಗಾಗಿ ಪ್ರತ್ಯೇಕ ಜಾಗ ಮೀಸಲಿಡಲಾಗಿದೆ. ಆದರೆ, ಬೈಕ್ ಸವಾರರು ಸೂಚಿಸಿದ ಸ್ಥಳದ ಬದಲು ನಗರಸಭೆ ಮುಖ್ಯದ್ವಾರದ ಎದುರು ಹಾಗೂ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿಯೇ ತಮ್ಮ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ನಗರಸಭೆಗೆ ಬರುವ ಜನತೆ ಬೈಕ್ ದಾಟಿಕೊಂಡು ಹೋಗಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ವಣವಾಗುತ್ತಿದೆ.
ನಗರಸಭೆಗೆ ನಿತ್ಯವೂ ಕಚೇರಿ ಕೆಲಸದ ನಿಮಿತ್ತ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ, ಜನತೆಗೆ ಓಡಾಡಲು ಸೂಕ್ತ ಜಾಗದ ವ್ಯವಸ್ಥೆ ಮಾಡಬೇಕಾದ ನಗರಸಭೆ, ಬೇಕಾಬಿಟ್ಟಿ ವಾಹನಗಳನ್ನು ರ್ಪಾಂಗ್ ಮಾಡುವವರ ವಿರುದ್ಧ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದಾಗಿ ನಗರಸಭೆಗೆ ಬರುವ ಜನತೆಗೆ ಮಾತ್ರವಲ್ಲ, ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳ ಕಾರುಗಳನ್ನು ಹೊರಗೆ ತೆಗೆಯಲು ಕೂಡ ಪರದಾಡುವಂತಾಗಿದೆ. ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಶಿಸ್ತುಬದ್ಧ ರ್ಪಾಂಗ್ಗೆ ವ್ಯವಸ್ಥೆ ಮಾಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಬೈಕ್ ಹಾಗೂ ಕಾರು ರ್ಪಾಂಗ್ಗಾಗಿ ಪ್ರತ್ಯೇಕ ಸ್ಥಳ ಮಾಡಲಾಗಿದೆ. ಆದರೂ ಕೆಲವರು ನಗರಸಭೆ ಮುಖ್ಯದ್ವಾರದ ಎದುರು ನಿಲ್ಲಿಸುತ್ತಿದ್ದಾರೆ. ಇದರಿಂದ ತೊಂದರೆ ಆಗುತ್ತಿದೆ. ಸಿಬ್ಬಂದಿಗೆ ಸೂಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. | ಡಾ.ಎನ್. ಮಹಾಂತೇಶ ನಗರಸಭೆ ಆಯುಕ್ತ
ನಗರಸಭೆ ಆವರಣದಲ್ಲಿ ಬೈಕ್ ನಿಲ್ಲಿಸಿರುವುದನ್ನು ನೋಡಿದರೆ ಇದು ನಗರಸಭೆಯೋ ಅಥವಾ ಯಾವುದೋ ರ್ಪಾಂಗ್ ಜಾಗವೋ ಎನ್ನುವ ಅನುಮಾನ ಬರುತ್ತದೆ. ವಯೋವೃದ್ಧರು ಒಳಗಡೆ ಹೋಗಬೇಕಾದರೆ ಮತ್ತೊಬ್ಬರ ಸಹಾಯ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು. | ಮಲ್ಲಯ್ಯ ಎಂ. ಸ್ಥಳೀಯ ವಯೋವೃದ್ಧ