ಕೊಳ್ಳೇಗಾಲ ಪಟ್ಟಣದಲ್ಲಿರುವ ನಗರಸಭೆ ಮುಂಭಾಗ ನಗರಸಭೆ ಸದಸ್ಯರು ನಗರಸಭೆ ಆಡಳಿತ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸಿದರು. ಜಿ.ಪಿ ಶಿವಕುಮಾರ್, ನಾಗಣ್ಣ, ಧರಣೀಶ್ ಇದ್ದಾರೆ. 
ಜಿಲ್ಲೆ

ನಗರಸಭೆ ಆಡಳಿತ ವಿರುದ್ಧ ಬಿಜೆಪಿ ಸದಸ್ಯರ ಪ್ರತಿಭಟನೆ

ಕೊಳ್ಳೇಗಾಲ: ನಗರಸಭೆ ಆಡಳಿತ ವೈಫಲ್ಯ ಖಂಡಿಸಿ ನಗರಸಭೆ ಬಿಜೆಪಿಯ ಸದಸ್ಯರು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.


ಸದಸ್ಯ ಜಿ.ಪಿ.ಶಿವಕುಮಾರ್ ಮಾತನಾಡಿ, ಮಾರ್ಚ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ನಿರ್ಣಯದ ಪುಸ್ತಕದಲ್ಲಿ ಬರೆದಿಲ್ಲ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಬಂದರೂ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬರುತ್ತಿಲ್ಲ. ಇ-ಸ್ವತ್ತು ಮಾಡಿಸಲು ಬಂದ ಜನರು ಬೇಸತ್ತು ಹೋಗಿದ್ದಾರೆ. ನೀವು ಅಧಿಕಾರ ವಹಿಸಿಕೊಂಡ ಮೇಲೆ ಅಕ್ರಮ ಖಾತೆಗಳು ಮಾಡಿದ್ದೀರಿ, ಬಡವರ ಒಂದು ಖಾತೆಯು ಆಗಿಲ್ಲ. ಈ ಎಲ್ಲ ವಿಚಾರಗಳು ಸಾರ್ವಜನಿಕರಿಗೆ ತಿಳಿಯಲಿ ಎಂಬ ಉದ್ದೇಶದಿಂದ ನಾವು ಬೀದಿಯಲ್ಲಿ ಧರಣಿ ಕುಳಿತ್ತಿದ್ದೇವೆ. ಎಲ್ಲ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಮುಂದೆ ಚರ್ಚೆಯಾಗಲಿ ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಶೀಲಾ ಹಾಗೂ ಪೌರಯುಕ್ತ ನಂಜುಂಡಸ್ವಾಮಿ ಧರಣಿ ನಿರತ ಸದಸ್ಯರುಗಳ ಭೇಟಿ ಮಾಡಿ ನೀವು ಇಲ್ಲಿ ಚರ್ಚೆ ಮಾಡುವ ಬದಲು ನನ್ನ ಕಚೇರಿಗೆ ಬನ್ನಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡು ಕೊಳ್ಳೋಣ ಎಂದು ತಿಳಿಸಿದರು.


ಪೌರಾಯುಕ್ತರು ಪ್ರತಿಕ್ರಿಯಿಸಿ, ನಾನಗಲಿ ಹಾಗೂ ನಮ್ಮ ಅಧಿಕಾರಿಗಳಾಗಲಿ ತಪ್ಪು ಮಾಡಿದ್ದರೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿ, ಈ ರೀತಿ ಬಹಿರಂಗವಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಈ ವೇಳೆ ಮದ್ಯ ಪ್ರವೇಶಿಸಿದ ನಗರಸಭೆ ಸದಸ್ಯೆ ಬಸ್ತೀಪುರ ಶಾಂತರಾಜು ಹಾಗೂ ಎ.ಪಿ.ಶಂಕರ್ ಬಸ್ತೀಪುರ ಹಾಗೂ ಲಿಂಗಣಾಪುರ ಬಡಾವಣೆಗಳಲ್ಲಿ ಜನರಿಗೆ ಇ-ಸ್ವತ್ತುಗಳನ್ನು ಮಾಡಿಕೊಡುತ್ತಿಲ್ಲ. ಗ್ರಾಮ ಠಾಣೆಯಿಂದ ಬಂದ ಸ್ವತ್ತು ಎಂದು ತಿರಸ್ಕರಿಸಿದ್ದೀರಾ. ಹಾಗಿದ್ದರೆ ಹೇಗೆ ನೀವು ನೀರು, ರಸ್ತೆ, ಚರಂಡಿ, ರಸ್ತೆಗಳ ಸೌಲಭ್ಯಗಳನ್ನು ಕಲ್ಪಿಸಿದ್ದೀರಿ ಎಂದು ನೀವು ಗ್ರಾಮಠಾಣೆ ಸೇರಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ನೀವು ವಾಪಸ್ ಗ್ರಾಮ ಪಂಚಾಯಿತಿಗಳಿಗೆ ಒಪ್ಪಿಸಿ ಬಿಡಿ ಎಂದು ಮರು ಪ್ರಶ್ನೆ ಹಾಕಿದರು.


ನಗರಸಭೆ ಅಧ್ಯಕ್ಷೆ ಸುಶೀಲಾ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸೋಣ ಧರಣಿ ಕೈಬಿಡಿ ಎಂದು ಮನವೊಲಿಸಲು ಮುಂದಾದರು. ಅದಕ್ಕೆ ಒಪ್ಪದ ಸದಸ್ಯರು ಜಿಲ್ಲಾಧಿಕಾರಿಗಳನ್ನು ಕರೆಯಿಸಿ ಅವರ ಮುಂದೆಯೇ ನಾವು ನಮ್ಮ ಅಹವಾಲನ್ನು ಹೇಳಿಕೊಳ್ಳುತ್ತೇವೆ ಎಂದು ಪಟ್ಟುಹಿಡಿದರು. ಸಂಜೆಯವರೆಗೂ ಜಿಲ್ಲಾಧಿಕಾರಿಗಳು ಬಾರದ ಕಾರಣ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಧರಣಿಯಲ್ಲಿ ನಗರಸಭೆ ಬಿಜೆಪಿ ಸದಸ್ಯ ನಾಗಣ್ಣ, ರಮ್ಯಾ ಮಹೇಶ್, ನಾಮನಿರ್ದೇಶನ ಸದಸ್ಯ ಅಂಬರೀಶ್, ಮುಖಂಡ ಸತೀಶ್, ರೈತ ಮುಖಂಡ ರಾಮಕೃಷ್ಣ, ಒಬಿಸಿ ಬಿಜೆಪಿ ಅಧ್ಯಕ್ಷ ಚಿಕ್ಕಲಿಂಗೇಗೌಡ, ಬಿಜೆಪಿ ಕಾರ್ಯದರ್ಶಿ ಮಹೇಶ್ ಬೆಂಡರಹಳ್ಳಿ, ರಾಜಶೇಖರ್, ಸುರೇಶ್, ರಾಜು, ಶ್ರೀನಿವಾಸ್ ಉಪಸ್ಥಿತರಿದ್ದರು.