ಜಿಲ್ಲೆ

ನಗರಸಭೆ ಅಧಿಕಾರಿಗಳಿಂದ ಸರ್ಕಾರಿ ರಸ್ತೆ ಒತ್ತುವರಿ ತೆರವು

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ 1ನೇ ವಾರ್ಡ್‌ಗೆ ಸೇರಿದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿರುವ 5ನೇ ಸರ್ಕಾರಿ ರಸ್ತೆಯ ಅತಿಕ್ರಮ ಒತ್ತುವರಿಯನ್ನು ಶನಿವಾರ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.

ಈ ಬಗ್ಗೆ ಸಾರ್ವಜನಿಕರು ಒತ್ತುವರಿ ತೆರವುಗೊಳಿಸಲು ನೀಡಿದ ದೂರಿನ ಅನ್ವಯ ಜಿಲ್ಲಾಧಿಕಾರಿ ಆದೇಶದಂತೆ ನಗರಸಭೆ ಪೌರಾಯುಕ್ತ ಎ.ರಮೇಶ್ ಅವರ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಚರಣೆ ನಡೆಯಿತು.

ಪೌರಾಯುಕ್ತ ರಮೇಶ್ ಮಾತನಾಡಿ, ಹಲವು ವರ್ಷಗಳಿಂದ ಜಿ.ಪಿ. ಮಲ್ಲಪ್ಪಪುರಂ ಬಡಾವಣೆಯ 5ನೇ ಅಡ್ಡರಸ್ತೆ ಒತ್ತುವರಿಯಾಗಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಅದರಂತೆ, ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ನಂತರ, ಸರ್ವೇ ಒತ್ತುವರಿ ಪ್ರಮಾಣವನ್ನು ಗುರುತಿಸಿ ಒತ್ತುವರಿದಾರರಿಗೆ ತಿಳಿವಳಿಕೆ ಪತ್ರವನ್ನು ನೀಡಲಾಗಿತ್ತು. ಒಟ್ಟು 15 ಒತ್ತುವರಿ ಕಂಡುಬಂದಿತ್ತು. ಇದೀಗ 13 ಒತ್ತುವರಿ ತೆರವು ಮಾಡಲಾಗಿದೆ. ಇನ್ನೆರಡು ಒತ್ತುವರಿದಾರರು ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದಾರೆ. ಆದರೂ ಒತ್ತುವರಿ ಜಾಗವನ್ನು ಬಿಡುವಂತೆ ತಿಳಿಸಿದ್ದೇವೆ ಎಂದರು.

ಒತ್ತುವರಿ ಕಾರ್ಯಾಚರಣೆ ವೇಳೆ ಪಟ್ಟಣ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಿದ್ದರು.

ಕಾರ್ಯಾಚರಣೆಯಲ್ಲಿ ನಗರಸಭೆ ಎಇಇ ನಟರಾಜು, ಪರಿಸರ ಇಂಜಿನಿಯರ್ ಪ್ರಸನ್ನ, ಅರೋಗ್ಯ ಅಧಿಕಾರಿ ಚೇತನ್‌ಕುಮಾರ್, ಕಂದಾಯ ನಿರೀಕ್ಷಕ ರವಿಶಂಕರ್, ನಂಜುಂಡಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.