ಜಿಲ್ಲೆ

ನಗರಪಾಲಿಕೆ ಭ್ರಷ್ಟಾಚಾರ ಮುಕ್ತಗೊಳಿಸಲು ಮಾಜಿ ಮೇಯರ್ ಭೈರಪ್ಪ ಸಲಹೆ

ಮೈಸೂರು: ನಗರಪಾಲಿಕೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಮುಕ್ತಗೊಳಿಸಲು ನೂತನ ಮೇಯರ್ ಶಿವಕುಮಾರ್ ಅವರಿಗೆ ಉತ್ತಮ ಅವಕಾಶ ದೊರೆತಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಜಿ ಮೇಯರ್ ಬಿ.ಎಲ್.ಭೈರಪ ಸಲಹೆ ನೀಡಿದರು.
ಪಾಲಿಕೆಯ ಬಹುತೇಕ ಎಲ್ಲ ವಿಭಾಗದಲ್ಲಿಯೂ ಭ್ರಷ್ಟಾಚಾರವಿದ್ದು, ಇದರ ಅನುಭವವನ್ನು ಸ್ವತಃ ನಾನೇ ಅನುಭವಿಸಿದ್ದೇನೆ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ನನ್ನ ತಂದೆಯ ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ ನಡೆಸಿ ಕೊನೆಗೆ ಮಧ್ಯವರ್ತಿಯ ಮೊರೆ ಹೋಗಬೇಕಾಯಿತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನಗರಪಾಲಿಕೆ ಸದಸ್ಯನಾಗಿ, ಸ್ಥಾಯಿ ಸಮಿತಿಯಲ್ಲಿ ಮೇಯರ್ ಅಗಿಯೂ ಕಾರ್ಯ ನಿರ್ವಹಿಸಿದ್ದರೂ ಪಾಲಿಕೆಯ ಭ್ರಷ್ಟಾಚಾರದ ಬಿಸಿ ನನ್ನನ್ನು ಬಿಟ್ಟಿಲ್ಲ. ಇನ್ನೂ ಸಾಮಾನ್ಯ ಜನರಿಗೆ ಹಣ ನೀಡದೆ ಯಾವುದೇ ಕೆಲಸ ಅಗುವುದಿಲ್ಲ ಎನ್ನುವ ಭಾವನೆ ಬಂದು ಬಿಟ್ಟಿದೆ. ಈಗ ಸ್ಥಳೀಯ ಸಂಸ್ಥೆಯಿಂದ ಕೇಂದ್ರದ ವರೆವಿಗೂ ಬಿಜೆಪಿ ಸರ್ಕಾರವೇ ಇದ್ದು, ಬಿಜೆಪಿಯವರೇ ಮೇಯರ್ ಅಗಿದ್ದಾರೆ. ಆದ್ದರಿಂದ ನಗರಪಾಲಿಕೆಯನ್ನು ಭ್ರಷ್ಟಚಾರ ಮುಕ್ತಗೊಳಿಸಲು ಒಳ್ಳೇಯ ಅವಕಾಶ ದೊರೆತಿದೆ ಎಂದು ಹೇಳಿದರು.
ಮೈಸೂರನ್ನು ಪ್ಲಾಸ್ಟಿಕ್, ತ್ಯಾಜ್ಯ ಮುಕ್ತವನಾಗಿಸಬೇಕು. ವಿದ್ಯಾರಣ್ಯಪುರಂನ ಸುಯೇಜ್ ಫಾರಂ ಸಮಸ್ಯೆ ಬಗೆಹರಿಸಬೇಕು. ಆನ್‌ಲೈನ್ ಮೂಲಕ ಸುಲಭವಾಗಿ ನಕ್ಷೆ ಪಡೆಯಬಹುದು ಎಂದು ಪ್ರಚಾರ ಮಾಡಿದರೂ ಯಾವುದಾದರೂ ಒಂದು ಆಕ್ಷೇಪ ವ್ಯಕ್ತ ಪಡಿಸಿ ಜನರು ಕಚೇರಿ ಬರುವಂತೆ ಮಾಡುವ ತಂತ್ರ ಅನುಸರಿಸಲಾಗುತ್ತಿದೆ. ಈ ಮೂಲಕ ಸಿಬ್ಬಂದಿ, ಅಧಿಕಾರಿಗಳು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.