ಚಿತ್ರದುರ್ಗ: ನಗರದೇವತೆಗಳ ದೇಗುಲಗಳಲ್ಲಿ ಕಡೇ ಕಾರ್ತಿಕ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅದ್ದೂರಿಯಾಗಿ ಜರುಗಿತು.
ಕಣಿವೆ ಮಾರಮ್ಮ, ಗೌರಸಂದ್ರ ಮಾರಮ್ಮ ದೇಗುಲಗಳ ಆವರಣದಲ್ಲಿ ಸಾಲು-ಸಾಲಾಗಿ ಜೋಡಿಸಿದ್ದ ಸಾವಿರಾರು ದೀಪಗಳನ್ನು ಹಚ್ಚುವ, ಅದಕ್ಕೆ ಶ್ರದ್ಧೆಯಿಂದ ಎಣ್ಣೆ ಹಾಕುವ ಮೂಲಕ ನೆರೆದಿದ್ದ ಭಕ್ತರು ಭಕ್ತಿ ಸಮರ್ಪಿಸಿದರು.
ದೇವಿಯರ ಮೂರ್ತಿಗಳನ್ನು ಸೇವಂತಿ, ಸುಂಗಂಧರಾಜ, ಕನಕಾಂಬರ, ಮಲ್ಲಿಗೆ, ಕಾಕಡ, ಗುಲಾಬಿ, ಬಟನ್ಸ್, ಪತ್ರೆ ಸೇರಿ ಬೃಹತ್ ಹೂವಿನ ಹಾರ, ಆಕರ್ಷಕ ವಸ್ತುಗಳಿಂದ ಭಕ್ತರ ಕಣ್ಮನ ಸೆಳೆಯುವಂತೆ ಅರ್ಚಕರು ಅಲಂಕರಿಸಿದ್ದರು.
ಕಾರ್ತಿಕೋತ್ಸವದ ಅಂಗವಾಗಿ ಇಡೀ ದೇಗುಲಗಳ ಆವರಣ ತಳಿರು-ತೋರಣ, ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ಮಹಿಳೆಯರು ಬಿಡಿಸಿದ್ದ ವರ್ಣಮಯ ರಂಗೋಲಿಗಳು ಗಮನ ಸೆಳೆದವು. ಉರುಮೆ ನಾದ, ಮಂತ್ರ ಘೋಷಗಳೊಂದಿಗೆ ಭಕ್ತರು ಭಕ್ತಿಯಲ್ಲಿ ಮಿಂದೆದ್ದರು.
ಕಣಿವೆ ಮಾರಮ್ಮ ದೇವಿ: ಕುಂಚಿಗನಾಳ್ ಮತ್ತು ನಗರ ಪೊಲೀಸ್ ಠಾಣೆ ಆವರಣದ ಕಣಿವೆ ಮಾರಮ್ಮ ದೇವಿ ದೇಗುಲದಲ್ಲಿ ಕಾರ್ತಿಕ ಮಹೋತ್ಸವ, ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಗೌರಸಂದ್ರ ಮಾರಮ್ಮ ದೇವಿ: ಹೊಳಲ್ಕೆರೆ ರಸ್ತೆ ಹಾಗೂ ಜೋಗಿಮಟ್ಟಿ ರಸ್ತೆಯ ಗೌರಸಂದ್ರ ಮಾರಮ್ಮ ದೇವಿ ದೇಗುಲದಲ್ಲಿ ದೇವಿಗೆ ಅಭಿಷೇಕ, ಅಲಂಕಾರ ಸೇರಿ ವಿಶೇಷ ಪೂಜೆಗಳು ಜರುಗಿದವು. ಸುತ್ತಮುತ್ತಲಿನ ಬಡಾವಣೆಗಳ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಹೂವು, ಹಣ್ಣು, ಕಾಯಿಯೊಂದಿಗೆ ಭಕ್ತಿ ಸಮರ್ಪಿಸಿದರು.
ಸಂಜೆ 6.30ರ ನಂತರ ನಡೆದ ದೀಪೋತ್ಸವದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು.