ಜಿಲ್ಲೆ

ನಗರದಲ್ಲೇ ಶೀಘ್ರ ರಸ್ತೆ ಅಗಲೀಕರಣಕ್ಕೆ ಕ್ರಮ ?

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಗರದ ರಸ್ತೆ ಅಗಲೀಕರಣ, ಸಮರ್ಪಕ ಸಂಚಾರ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನೇತೃತ್ವದ ಹಿರಿಯ ಅಧಿಕಾರಿಗಳ ದಂಡು ಶುಕ್ರವಾರ ಮುಂಜಾನೆ ನಗರದ ವಿವಿಧೆಡೆ ಭೇಟಿ ನೀಡಿ ಸ್ಥಳ ಪರಿಶೀಲಿಸಿತು.

ನಗರದ ಗಾಂಧಿವೃತ್ತ, ಚಳ್ಳಕೆರೆ ಗೇಟ್, ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಸೇರಿದಂತೆ ಕೆಲವು ಕಡೆ ಸ್ಥಳ ವೀಕ್ಷಿಸಿ, ಸುಗಮ ಸಂಚಾರಕ್ಕೆ ಆಗುತ್ತಿರುವ ಅಡ್ಡಿ, ನಗರದ ಹಲವೆಡೆ ಏಕಾಏಕಿ ತಲೆ ಎತ್ತುತ್ತಿರುವ ಗೂಡಂಗಡಿಗಳನ್ನು ಡಿಸಿ ಗಮನಿಸಿದರು. ರಸ್ತೆ ಅಭಿವೃದ್ಧಿ, ಡಿವೈಡರ್ ನಿರ್ಮಾಣವಾಗಿದ್ದರೂ, ಪಾರ್ಕಿಂಗ್‌ಗೆ ಸೂಕ್ತ ಜಾಗವಿಲ್ಲದೆ ಸಂಚಾರಕ್ಕಾಗಿ ವಾಹನ ಸವಾರರೊಂದಿಗೆ ಪಾದಚಾರಿಗಳೂ ರಸ್ತೆಯನ್ನೇ ಅವಲಂಬಿಸಿರುವುದು, ಹಲವೆಡೆ ಫುತ್‌ಪಾತ್ ಮಾಯವಾಗಿರುವುದು ಇತ್ಯಾದಿ ಸಮಸ್ಯೆಗಳೆಡೆ ಗಮನ ಹರಿಸಲಾಯಿತು.

ಚಳ್ಳಕೆರೆ ಗೇಟ್‌ನಿಂದ ಬಿ.ಡಿ. ರೋಡ್ ಹೊಳಲ್ಕೆರೆ ರಸ್ತೆ ಹಾಗೂ ದಾವಣಗೆರೆ ರಸ್ತೆ, ಮೆದೇಹಳ್ಳಿ ರಸ್ತೆ ಇತ್ಯಾದಿಗಳೆಡೆ ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚಿಸಿದ ಅಧಿಕಾರಿಗಳು, ಸಿಗ್ನಲ್ ಅಳವಡಿಕೆಯಿಂದ ಅನುಕೂಲ, ಅನಾನುಕೂಲಗಳನ್ನು ವಿಶ್ಲೇಷಿಸಿದರು.

ಆಕ್ರೋಶ ವ್ಯಕ್ತವಾಗಿತ್ತು

ನಗರದಲ್ಲಿ ಸಂಚಾರ ಸಮಸ್ಯೆ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಎಂ.ಚಂದ್ರಪ್ಪ ಸೇರಿದಂತೆ ನಾನಾ ಜನಪ್ರತಿನಿಧಿಗಳಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ರಸ್ತೆ ಅಗಲೀಕರಣದ ತಡೆಯಾಜ್ಞೆಗೆ ಸಂಬಂಧಿಸಿ ನಗರಸಭೆ ಅಧಿಕಾರಿಗಳ ವಿರುದ್ಧವೂ ಕೆಂಡಕಾರಿದ್ದರು. ಗಾಂಧಿ ಸರ್ಕಲ್‌ನಲ್ಲಿ ಬಹುಮಹಡಿ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸಲಹೆ ಕೇಳಿ ಬಂದಿತ್ತು. ಅವೈಜ್ಞಾನಿಕವಾಗಿ ಡಿವೈಡರ್ ತೆರವು ಕಾರ‌್ಯಪೂರ್ಣವಾಗದ ಕುರಿತಂತೆ ಅಸಮಾಧಾನ ವ್ಯಕ್ತವಾಗಿತ್ತು.

ಮಾರ್ಗ ಬದಲಾವಣೆಗೆ ಸಲಹೆ

ಈಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದಿದ್ದ ರಸ್ತೆ ಸುರಕ್ಷತಾ ಸಭೆಯಲ್ಲಿ ಬಿ.ಡಿ. ರಸ್ತೆಯಲ್ಲಿ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್ ಸಹಿತ ಭಾರಿ ವಾಹನಗಳ ಸಂಚಾರಕ್ಕೆ ಹಾಗೂ ಪ್ರತಿಭಟನೆಗಳಿಗೆ ನಿಷೇಧ ವಿಧಿಸುವ ಸಲಹೆ ಕೇಳಿ ಬಂದಿತ್ತು. ಆದರೆ ಅದರ ಜಾರಿ ಹೇಗೆ ಎಂಬ ಜಿಜ್ಞಾಸೆ ಅಧಿಕಾರಿಗಳನ್ನು ಈಗಲೂ ಕಾಡಿದೆ.

ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಡಿಸಿ ರಸ್ತೆ ಸ್ಕೆಚ್ ಸಹಿತ ಅಗಲೀಕರಣ, ಅಭಿವೃದ್ಧಿ ಕುರಿತಂತೆ ಶೀಘ್ರ ವರದಿ ಸಲ್ಲಿಸುವಂತೆ, ಲೋ ಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ನಗರಸಭೆ ಆಯುಕ್ತೆ ಎಂ.ರೇಣುಕಾ, ಡಿವೈಎಸ್‌ಪಿ ಪಿ.ಕೆ.ದಿನಕರ್, ಎಇಇ ಸಿ.ಚಂದ್ರಪ್ಪ, ತಹಸೀಲ್ದಾರ್ ಡಾ.ನಾಗವೇಣಿ ಮತ್ತಿತರ ಅಧಿಕಾರಿಗಳಿದ್ದರು.