ಯಾದಗಿರಿ: ಸಗರನಾಡಿನ ಆರಾಧ್ಯ ದೈವ ದಿಗ್ಗಿ ಸಂಗಮೇಶ್ವರ ಹಾಗೂ ಭೀ.ಗುಡಿಯ ಬಲಭೀಮರಾಯನ ಜೋಡು ಪಲ್ಲಕ್ಕಿ ಉತ್ಸವ ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ ನಗರ ಸಜ್ಜಾಗಿದೆ.
ನಗರದ ಹಾದಿಬೀದಿಗಳಲ್ಲಿ ಭಾಗವಧ್ವಜಗಳು ರಾರಾಜಿಸುತ್ತಿವೆ, ಕೇಸರಿ ಬ್ಯಾನರ್ಗಳ ಜತೆಗೆ ಹನುಮನ ಚಿತ್ರವಿರುವ ಧ್ವಜಗಳು ವಾಹನಗಳ ಮೇಲೆ ಕಂಗೊಳಿಸುತ್ತಿವೆ. ಭೀ.ಗುಡಿಯ ಬಲಭೀಮರಾಯನ ಜಾತ್ರೆ ಸಗರನಾಡಿನಲ್ಲಿ ಪ್ರಮುಖವಾಗಿದೆ. ಹಿಂದೆ ಭೀಮರಾಯನ ಗುಡಿ ಅಮಲಾಪುರ ಎಂಬ ಹಳ್ಳಿಯಾಗಿತ್ತು ಎಂದು ಹೇಳಲಾಗುತ್ತದೆ. ಬಲಭೀಮರಾಯ ಅಥವಾ ಆಂಜನೇಯ ಈ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೇವರಾಗಿದ್ದನಂತೆ. ಅಂದಿನ ಅಮಲಾಪುರ ಎಂಬ ಹಳ್ಳಿ ಇಂದು ಭೀಮರಾಯನಗುಡಿ ಎಂದು ಕನರ್ಾಟಕದಾದ್ಯಂತ ಜನಪ್ರೀಯವಾಗಿದೆ.
ಬಲಭೀಮರಾಯನ ದೇವಸ್ಥಾನದ ಸ್ವರೂಪ, ಲಕ್ಷಣಗಳು ಮತ್ತು ಆ ಸ್ಥಳದಲ್ಲಿ ದೊರತಿರುವ ಐತಿಹಾಸಿಕ ಕುರುಹುಗಳು ಶಾಸನಗಳ ಆಧಾರದ ಮೇಲೆ ಇದೊಂದು ಶೈವ ದೇವಾಲಯವಾಗಿತ್ತೆಂದು ಸಂಶೋದಕ ಡಿ.ಎನ್. ಅಕ್ಕಿ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಐತಿಹಾಸಿಕ ಪರಂಪರೆಯ ತಾಣವಾಗಿತ್ತೆಂದು ಮೇಡೊಸ್ ಟೈಲರ್ ಕೃತಿಗಳು ಆಧಾರ ಒದಗಿಸುತ್ತವೆ.
ಪ್ರತಿ ವರ್ಷ ಸಂಕ್ರಾಂತಿಗೆ ಈ ಬಲಭೀಮರಾಯನ ಜಾತ್ರೆ ಬಹುವಿಜೃಂಬಣೆಯಿಂದ ಜರುಗುತ್ತದೆ. ಜಾತ್ರೆಯಲ್ಲಿ ಪಲ್ಲಕ್ಕಿ ಉತ್ಸವ ಬಹಳಷ್ಟು ವಿಶಿಷ್ಟತೆಯಿಂದ ನಡೆಯುತ್ತದೆ. ಯಾದಗಿರಿ ತಾಲೂಕಿನ ಹುರಸುಗುಂಡಗಿ ಗ್ರಾಮದ ಹತ್ತಿರ ಹರಿಯುವ ಭೀಮಾನದಿಗೆ ಪಲ್ಲಕ್ಕಿ ತೆಗೆದುಕೊಂಡು ಹೋಗಿ ಗಂಗಾಸ್ನಾನ ಹಾಗೂ ಪೂಜಾಕಾರ್ಯಗಳನ್ನು ನೆರವೇರಿಸಿಕೊಂಡು ವಿವಿಧ ಗ್ರಾಮಗಳ ಮೂಲಕ ಪಲ್ಲಕ್ಕಿ ಮೆರವಣಿಗೆ ರಾತ್ರಿ ಶಹಾಪುರ ನಗರ ಪ್ರವೇಶಿಸುತ್ತದೆ. ಅದೇ ರೀತಿ ದಿಗ್ಗಿ ಸಂಗಮನಾಥನ ಪಲ್ಲಕ್ಕಿ ಸಹ ಅಲ್ಲಿಗೆ ಬಂದು ಸೇರುತ್ತದೆ. ಬಲಭೀಮರಾಯನ ಮತ್ತು ದಿಗ್ಗಿ ಸಂಗಮನಾಥನ ಜೋಡು ಪಲ್ಲಕ್ಕಿಗಳನ್ನು ಶಹಾಪುರ ನಗರದಾದ್ಯಂತ ಬಹು ವಿಜೃಂಬಣೆಯಿಂದ ಮೆರವಣಿಗೆ ಮಾಡಲಾಗುತ್ತದೆ.
ಬೆಳಗಾಗುವವರೆಗೂ ನಡೆಯುವ ಈ ಪಲ್ಲಕಿ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ಭಾಗವಹಿಸುತ್ತಾರೆ. ಭಕ್ತಾದಿಗಳು ಪಲ್ಲಕಿಗೆ ನೈವೇದ್ಯ, ಕಾಯಿ, ಪಲ್ಲಕ್ಕಿಯ ಉತ್ಸವದಲ್ಲಿ ಡೊಳ್ಳು ಕುಣಿತ, ಹಲಗೆಯ ವಾದನ, ಕರಡಿ ಮಜಲು, ಬ್ಯಾಂಡ್, ಬ್ಯಾಂಜೊ, ಭಜನೆ ಮುಂತಾದ ಕಲೆಗಳು ಪ್ರದರ್ಶನಗೊಳ್ಳುತ್ತವೆ.