ಜಿಲ್ಲೆ

ನಗರದಲ್ಲಿ ಸರಣಿ ಕಳ್ಳತನ : ಜನರಲ್ಲಿ ಭೀತಿ

ಹಾಸನ: ನಗರದ ಹೃದಯ ಭಾಗದಲ್ಲಿರುವ ನರಸಿಂಹರಾಜ ವೃತ್ತದ ಸಮೀಪ ಗುರುವಾರ ರಾತ್ರಿ 4 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಪಿಕ್ಚರ್ ಪ್ಯಾಲೇಸ್ ಬಟ್ಟೆ ಅಂಗಡಿ, ಮೊಬೈಲ್ ರಿಪೇರಿ ಅಂಗಡಿ, ಬ್ಯಾಂಗಲ್ ಸ್ಟೋರ್, ಮೆಡಿಕಲ್ ಸ್ಟೋರ್ ಸೇರಿದಂತೆ ಒಟ್ಟು 7 ಅಂಗಡಿಗಳ ರೋಲಿಂಗ್ ಶಟರ್ ಬೀಗ ಒಡೆಯಲಾಗಿದೆ. ಆದರೆ 4 ಅಂಗಡಿಗಳಿಗೆ ಮಾತ್ರ ಕಳ್ಳರಿಗೆ ಒಳನುಗ್ಗಲು ಸಾಧ್ಯವಾಗಿದೆ. ಹೊಯ್ಸಳ ಸೆಲೆಕ್ಷನ್ ಎಂಬ ಬಟ್ಟೆ ಅಂಗಡಿಯಲ್ಲಿ 50 ಸಾವಿರ ರೂ. ನಗದು, ಜೀನ್ಸ್ ಪ್ಯಾಂಟ್‌ಗಳು ಮತ್ತು ಶರ್ಟ್‌ಗಳು ಸೇರಿ ಒಂದು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಪಕ್ಕದ ಸಂಪಿಗೆ ಪ್ಯಾಷನ್ಸ್ ಅಂಗಡಿಯಲ್ಲಿ 80 ಸಾವಿರ ರೂ. ನಗದು ಮಾತ್ರ ಕದ್ದಿದ್ದಾರೆ, ಯಾವುದೇ ಬಟ್ಟೆ ಮುಟ್ಟಿಲ್ಲ.

ಈ ಅಂಗಡಿ ಪಕ್ಕದ ಸಾರ್ಜಿಲ್ ಮೊಬೈಲ್ ಅಂಗಡಿಯಲ್ಲಿ ರಿಪೇರಿಗೆ ಬಂದಿದ್ದ ಮೊಬೈಲ್‌ಗಳನ್ನು ಕಳವು ಮಾಡಲಾಗಿದೆ. ಅದರ ಪಕ್ಕದ ಬಾಲಾಜಿ ಮೊಬೈಲ್ ರಿಪೇರಿ ಅಂಗಡಿಯಲ್ಲಿದ್ದ 300 ರೂ. ನಗದು ಕಳುವಾಗಿದೆ. ಗಿರಿ ಮೆಡಿಕಲ್ಸ್, ಬಾಲಾಜಿ ಬ್ಯಾಂಗಲ್ಸ್ ಸ್ಟೋರ್, ಶಿವಾಜಿ ಸ್ಟೋರ್‌ಗಳ ರೋಲಿಂಗ್ ಶಟರ್ ಬೀಗ ಮುರಿಯಲಾಗಿದೆ. ಆದರೆ ಶಟರ್‌ಗೆ ಹೊಂದಿಕೊಂಡ ಬೀಗ ಮುರಿಯಲಾಗದೆ ಮುರಿದ ಬೀಗಗಳನ್ನು ಅಲ್ಲೇ ಎಸೆದು ಕಳ್ಳರು ಪರಾರಿ ಆಗಿದ್ದಾರೆ

ಅಂಗಡಿಗಳ ಮಾಲೀಕರು ಶುಕ್ರವಾರ ಬೆಳಗ್ಗೆ ಬಾಗಿಲು ತೆಗೆಯಲು ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಆರ್. ಮೋಹನ್ ಅವರು ಅಂಗಡಿ ಮಾಲೀಕರಿಗೆ ಧೈರ್ಯ ಹೇಳಿದರು. ನಗರದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು. ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಸರಣಿ ಕಳ್ಳತನ ನಡೆದಿರುವ ಸ್ಥಳದ ಸಮೀಪದಲ್ಲೇ ಎಸ್‌ಬಿಐ ಶಾಖೆ ಇರುವುದರಿಂದ ಅಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿ ಕಳ್ಳರ ಚಲನವಲನ ಸೆರೆಯಾಗಿರುವ ಸಾಧ್ಯತೆ ಇದೆ. ಕಳ್ಳರನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.