ಹಾಸನ: ಹಿಂದೂಗಳ ಶ್ರೇಷ್ಟ ಹಬ್ಬವಾದ ವರಮಹಾಲಕ್ಷ್ಮೀ ವ್ರತ ಪ್ರತಿ ಮನೆ ಮನೆಗಳಲ್ಲೂ ಮಹಿಳೆಯರು ವಿಜೃಂಭಣೆಯಿಂದ ಆಚರಿಸಿದರು. ಮಹಾಲಕ್ಷ್ಮೀಗೆ ಮಖವಾಡ ಹಾಕಿ ಶೃಂಗಾರ ಮಾಡಿ ದೇವಿಗೆ ಸೀರೆ ಉಡಿಸಿ, ಹೂವಿನಿಂದ ದೇವಿಯನ್ನು ಅಲಂಕಾರ ಮಾಡಿದ್ದರು. ಜತೆಗೆ ವಿವಿಧ ಸಿಹಿ ತಿನಿಸುಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದರು.
ನಗರದ ಲಕ್ಷ್ಮೀಪುರಂ ಬಡಾವಣೆ, ಜವೇನಹಳ್ಳಿ ಮಠದ ಬಳಿ ವಾಸವಾಗಿರುವ ಶಿಕ್ಷಕರು ಮತ್ತು ಪತಂಜಲಿ ಸಮಿತಿಯ ಪ್ರಭಾರಿ ಗಿರೀಶ್ ಮತ್ತು ಪಲ್ಲವಿ ಮನೆಯಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಯಿತು. ಶುಕ್ರವಾರ ಬೆಳಗಿನಿಂದಲೇ ವಿವಿಧ ರೀತಿಯ ಪೂಜೆ ಮತ್ತು ಭಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷ್ಮೀ ವ್ರತ, ಕಥೆಯನ್ನು ಓದಲಾಯಿತು. ಅಕ್ಕಪಕ್ಕದ ಹಾಗೂ ಸಂಬಂಧಿಕರನ್ನು ಕರೆದು ಕುಂಕುಮದ ಜತೆಗೆ ತಾಂಬೂಲ ನೀಡಲಾಯಿತು. ಈ ವೇಳೆ ಮಹಿಳೆಯರು ದೇವರ ಹಾಡನ್ನು ಭಕ್ತಿಯಿಂದ ಹಾಡಿದರು.
ಇದೆ ವೇಳೆ ಬೇಲೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಗುರುಪ್ರಸಾದ್ ಮಾತನಾಡಿ, ಹೆಚ್ಚಿನ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಹೆಚ್ಚಾಗಿ ಬರುತ್ತವೆ. ಅದರಲ್ಲಿ ಚಾತುರ್ಮಾಸದ ಶ್ರಾವಣ ಮಾಸ ಮಹತ್ವದ್ದಾಗಿದೆ. ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗಿನ ನಾಲ್ಕು ತಿಂಗಳ ಕಾಲಾವಧಿಯನ್ನು ಚಾತುರ್ಮಾಸ ಎನ್ನುತ್ತೇವೆ. ವ್ರತಗಳಲ್ಲಿ ವರಮಹಾಲಕ್ಷ್ಮೀ ವ್ರತವೂ ಮಹತ್ವಪೂರ್ಣ ವ್ರತವಾಗಿದೆ. ಇತ್ತೀಚೆಗೆ ಸಾಮೂಹಿಕ ವರಮಹಾಲಕ್ಷ್ಮೀ ವ್ರತ ಕಾರ್ಯಕ್ರಮಗಳನ್ನೂ ಹೆಚ್ಚೆಚ್ಚು ಆಯೋಜನೆ ಮಾಡಲಾಗುತ್ತಿದೆ. ಯಾರು ಶ್ರದ್ಧೆ-ಭಕ್ತಿಯಿಂದ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಮಾಡುತ್ತಾರೆಯೋ ಅವರಿಗೆ ಶ್ರೀ ದೇವಿಯು ಕೃಪೆ ತೋರಲಿದ್ದಾಳೆ ಎಂಬ ನಂಬಿಕೆ ಇದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ಮಂಜುನಾಥ್, ಪಲ್ಲವಿ, ಪತಂಜಲಿ ಯೋಗಾ ಸಮಿತಿ ಪ್ರಭಾರಿ ಗಿರೀಶ್ ಇತರರು ಉಪಸ್ಥಿತರಿದ್ದರು.