ಹಾಸನ: ಪ್ರತಿ ವರ್ಷದಂತೆ ಈ ವರ್ಷವು ಕೂಡ ರಂಜಾನ್ ಹಬ್ಬದ ಅಂಗವಾಗಿ ಗುರುವಾರದಂದು ಮುಸಲ್ಮಾನ ಬಾಂಧವರು ನಗರದ ಹೊಸಲೈನ್ ರಸ್ತೆ ಬಳಿ ಇರುವ ಹಳೇ ಈದ್ಗಾ ಮೈದಾನದ ಆವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಾಗದ ಕೊರತೆಯಿಂದ ಮತ್ತು ತಡವಾಗಿ ಬಂದವರು ರಸ್ತೆ ಮೇಲೆ ನಿಂತು ಪ್ರಾರ್ಥನೆ ಸಲ್ಲಿಸಿದರು.
ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಮುಸ್ಲಿಂ ಬಾಂಧವರಿಗೆ ಶುಭ ಹಾರೈಸುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದರು. ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಸುಮುಖ ರಘು, ಸಯ್ಯದ್ ಅಕ್ಬರ್, ಹೊಂಬೇಶ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಮುಖಂಡರಾದ ಎಚ್.ಕೆ. ಜವರೇಗೌಡ, ಬನವಾಸೆ ರಂಗಸ್ವಾಮಿ, ಕೃಷ್ಣಕುಮಾರ್, ಮಲ್ಲಿಗೆವಾಳ್ ದೇವಪ್ಪ, ರಂಜಿತ್ ಗೊರೂರು, ಜಾವಗಲ್ ಮಂಜುನಾಥ್, ಪ್ರಕಾಶ್, ರಾಮಚಂದ್ರ ಇತರರು ಮುಸ್ಲಿಂ ಬಾಧವರಿಗೆ ಶುಭ ಹಾರೈಸಿದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಪ್ರತಿವರ್ಷವೂ ಕೂಡ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದು ಇದೇ ಮುಸಲ್ಮಾನವರು. ಅವರಿಗೆಲ್ಲಾ ಕೃತಜ್ಞತೆ ಹೇಳಿ ಹಬ್ಬದ ಶುಭಾಶಯ ಹೇಳಲು ಬಂದಿದ್ದೇನೆ. ಕಳೆದ ವರ್ಷ ಬಂದಾಗ ನಾನು ಶಾಸಕನಾಗಿರಲಿಲ್ಲ. ಈಗ ಶಾಸಕನಾಗಿ ಬಂದಿದ್ದೇನೆ. ಆ ಋಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಹಾಸನ ವಿಧಾನಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಮಾತನಾಡಿ, ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಮುಗಿಸಿ ರಂಜಾನ್ ಹಬ್ಬ ಆಚರಿಸುವ ನಿಟ್ಟಿನಲ್ಲಿ ಹಳೆಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲಾ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ನಾವೆಲ್ಲರೂ ಕೂಡ ಸಹೋದರತ್ವ, ಸಹಬಾಳ್ವೆಯಿಂದ ಬಾಳಬೇಕು. ಎಲ್ಲ ಮುಸಲ್ಮಾನ್ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದರು.
ಈದ್ಗಾ ಸಮಿತಿ ಅಧ್ಯಕ್ಷ ಸಮೀರ್ ಖಾನ್ ಮಾತನಾಡಿ, ಸಮಸ್ತ ನಾಗರಿಕ ಬಂಧುಗಳಿಗೆ, ಅಣ್ಣ-ತಮ್ಮಂದಿರಿಗೆ ಹಾಗೂ ಅಕ್ಕತಂಗಿಯರಿಗೆ ರಂಜಾನ್ ಹಬ್ಬದ ಶುಭಾಶಯಗಳು. 30 ದಿನಗಳ ಕಾಲ ಉಪವಾಸವನ್ನು ಮಾಡಿ ಕೊನೆಯ ದಿವಸ ಪ್ರಾರ್ಥನೆಯೊಂದಿಗೆ ರಂಜಾನ್ ಉಪವಾಸ ಮುಕ್ತಾಯಗೊಳಿಸಿದ್ದೇವೆ. ಈ ದಿನ ವಿಶೇಷ ಪ್ರಾರ್ಥನೆಯೊಂದಿಗೆ ಜಗತ್ತಿನ ಎಲ್ಲಾ ಕೆಡುಕುಗಳಿಗೆ ಅಂತ್ಯವಾಗಲು ಬೇಡಿಕೊಳ್ಳುತ್ತೇವೆ. ಈಗ ಬರಗಾಲ ಬಂದಿದ್ದು, ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಗಿದೆ ಎಂದರು.