ಜಿಲ್ಲೆ

ನಗರದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 79ನೇ ಜನ್ಮ ಜಯಂತಿಗೆ ಶಾಸಕರು ಚಾಲನೆ

Hassan - Mohan Kanthur

ಹಾಸನ: ಯುಗಯೋಗಿ, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಒಂದು ಸಮುದಾಯಕ್ಕೆ ಸೀಮಿತವಾಗದೇ ಇಡೀ ಸಮಾಜದಲ್ಲಿ ನೊಂದ ವರ್ಗದ ಜನತೆಗೆ ದನಿಯಾದರು ಎಂದು ಶಾಸಕ ಎಚ್.ಪಿ. ಸ್ವರೂಪ್ ಹೇಳಿದರು.
ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 79ನೇ ಜನ್ಮ ಜಯಂತಿಯನ್ನು ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಕುಟುಂಬದ ಸದಸ್ಯರು ಹಾಗೂ ಮಠದ ಸದ್ಭಕ್ತರು ನಗರದ ಹೇಮಾವತಿ ಪ್ರತಿಮೆ ಬಳಿ ಗುರುವಾರ ಸ್ವಾಮೀಜಿ ಭಾವಚಿತ್ರವನ್ನಿಟ್ಟು ನಮನ ಸಲ್ಲಿಸಿ ಮಾತನಾಡಿದ ಅವರು, ಶ್ರೀ ಮಠದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅವರು ನೀಡಿದ ವಿದ್ಯಾ ದಾನ ಎಂದಿಗೂ ಚಿತಸ್ಥಾಯಿಯಾಗಿದೆ. ಅವರು ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದೆ. ಪ್ರತಿವರ್ಷ ನಮ್ಮ ಕುಟುಂಬದಿಂದ ಸ್ವಾಮೀಜಿಯವರ ಜನ್ಮದಿನದಂದು ಅನ್ನದಾನವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದರು.
ನಮಗೆ ಶಂಭುನಾಥ ಸ್ವಾಮೀಜಿ ಸಿಕ್ಕಿರುವುದು ಬಹಳ ಪುಣ್ಯ. ಬಾಲಗಂಗಾಧರ ಮಹಾಸ್ವಾಮೀಜಿ ಆಶೀರ್ವಾದದಿಂದ ಹೊರ ರಾಜ್ಯ, ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಳಳಿಗೆ ವಿದ್ಯಾದಾನ, ಅನ್ನ ದಾಸೋಹವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷರಾದ ಜಿ.ಎಲ್. ಮುದ್ದೇಗೌಡ ಅವರು ಮಾತನಾಡಿ, ಜಿಲ್ಲೆಗೆ ಮಹಾ ಸ್ವಾಮೀಜಿಗಳ ಪಾದಾರ್ಪಣೆಯಿಂದ ಅನೇಕ ಸತ್ಕಾರ್ಯಗಳು ಹಾಸನದಲ್ಲಿ ನಡೆದಿವೆ. ಶಾಲಾ, ಕಾಲೇಜುಗಳನ್ನು ತೆರೆಯಲಾಯಿತು. ಹಳ್ಳಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಸಹಾಯ ಮಾಡಿದ್ದಾರೆ. ವಂಚಿತರಾದಂತಹ ಸಮುದಾಯವನ್ನು ಮೇಲಕ್ಕೆ ಎತ್ತಿದ್ದಾರೆ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಭೇದ-ಭಾವ ಮಾಡದೇ ಎಲ್ಲಾ ಸಮುದಾಯವನ್ನು ಒಂದೇ ರೀತಿ ಕಂಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ 70 ಜನ ಪೀಠಾಧ್ಯಕ್ಷರು ಬಂದರೂ ಕೂಡ ನಾಡಿಗೆ ಅಷ್ಟೊಂದು ಗೋಚರವಾಗಿರಲಿಲ್ಲ. 71ನೇ ಪೀಠಾಧ್ಯಕ್ಷರಾಗಿ ಬಂದಂತಹ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಶ್ರದ್ಧೆಯಿಂದ ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಬಹುವಿಧ ದಾಸೋಹಿಗಳಾಗಿ ನಾಡಿಗೆ ನೀಡಿರುವ ಕೊಡುಗೆ ಮಹತ್ತರವಾದುದು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ ಮಾತನಾಡಿ, ಯುಗಯೋಗಿ, ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಕುಟುಂಬವು ಪ್ರತಿವರ್ಷ ಅನ್ನದಾನ ಕಾರ್ಯವನ್ನು ಮಾಡಿಕೊಂಡು ಬರಲಾಗುತ್ತಿರುವುದು ಪೂಜ್ಯರ ಮೇಲೆ ಇಟ್ಟಿರುವ ಭಕ್ತಿಯಾಗಿದೆ. ಮಹಾಸ್ವಾಮೀಜಿಯವರ ಜತೆ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ನೆನಪಿಸಿಕೊಂಡರು.
ಇದೇ ವೇಳೆ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಈ ವೇಳೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ನಗರಸಭೆ ಸದಸ್ಯ ಚಂದ್ರೇಗೌಡ, ಚಂದ್ರಶೇಖರ್, ಕುವೆಂಪು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಿ.ಈ. ಶಿವರಾಮೇಗೌಡ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ನಾಗಮ್ಮ ಇತರರು ಹಾಜರಿದ್ದರು.