ಹಾಸನ: ಪ್ರಜಾಪ್ರಭುತ್ವದ ಮೌಲ್ಯಗಳನ್ನು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ಬಸವಣ್ಣ ಎಂದು ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಐಸಾಮಿಗೌಡ ಅವರು ಹೇಳಿದರು.
ನಗರದ ಅರಳೆಪೇಟೆ ರಸ್ತೆಯ ಬಸವೇಶ್ವರ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಸರ್ವರಿಗೂ ಸಮಬಾಳು-ಸಮಪಾಲು ಎಂಬ ತತ್ವವನ್ನು ಹಾಕಿಕೊಟ್ಟವರು ಬಸವಣ್ಣ. ಜಾತಿ ತಾರತಮ್ಯ, ಮಹಿಳೆಯರ ಸಮಾನತೆ, ಅಸ್ಪೃಶ್ಯತೆ ವಿರುದ್ಧ ಬಸವಣ್ಣ ಅವರು ವಚನ ಕ್ರಾಂತಿ ನಡೆಸಿದರು. ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ತಮ್ಮದೇಯಾದ ವಿಚಾರಗಳನ್ನು ಪ್ರತಿಪಾದಿಸಿದ ಬಸವಣ್ಣ ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದರು.
ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸನ್ಮಾರ್ಗದಲ್ಲಿ ಕೊಂಡೊಯ್ಯುವ ದಿಶೆಯಲ್ಲಿ ಜಗಜ್ಯೋತಿ ಬಸವೇಶ್ವರ ನಮಗೆಲ್ಲರಿಗೂ ಆದರ್ಶ. ಪ್ರತಿವರ್ಷವೂ ಕೂಡ ಸಂಘದ ವತಿಯಿಂದ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಬಸವಣ್ಣ ಅವರ ಆದರ್ಶ ಮತ್ತು ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ಸಮಾಜ ಹಾಗು ಸಂಘಟನೆಯ ಸಮಗ್ರ ಅಭಿವೃದ್ಧಿಗೆ ನಾವೆಲ್ಲಾ ಪಣತೊಡಬೇಕೆಂದು ಕರೆ ನೀಡಿದರು.
ಬಸವ ಜಯಂತಿ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
ವೀರಶೈವ ಲಿಂಗಾಯತ ಸಂಘದ ಭುವನಾಕ್ಷ, ರುದ್ರಕುಮಾರ್, ಮಲ್ಲಿಕಾರ್ಜುನ್, ಶೋಭನ್ ಬಾಬು, ಮಯೂರಿ ಲೋಕೇಶ್, ಯು.ಎಸ್.ಬಸವರಾಜು, ಮಿಥುನ್, ನಾಗೇಶ್, ಡಾ.ಜಯರಾಜ್, ಕಾಂತರಾಜು, ಅನ್ನಪೂರ್ಣ, ಷಡಕ್ಷರಿ, ಕೀರ್ತಿಕುಮಾರ್ ಇತರರು ಇದ್ದರು.