ಬೆಳಗಾವಿ ಶೆಟ್ಟಿಗಲ್ಲಿ ಕಾರ್ನರ್‌ನಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ಗೆ ಪೊಲೀಸ್ ಬ್ಯಾರಿಕೇಡ್‌ನಿಂದ ಮುಚ್ಚಿರುವುದು. 
ಜಿಲ್ಲೆ

ನಗರದಲ್ಲಿ ತೆರೆದ ಮ್ಯಾನ್‌ಹೋಲ್‌ಗೆ ಬ್ಯಾರಿಕೇಡ್ ರಕ್ಷಣೆ!

ಬೆಳಗಾವಿ: ನಗರದ ಶೆಟ್ಟಿಗಲ್ಲಿಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್ ತೆರದುಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮೂರು ವರ್ಷದಿಂದ ಬಾಯಿ ತೆರೆದುಕೊಂಡಿದ್ದರೂ ಅದರ ದುರಸ್ತಿಗೆ ಇನ್ನೂ ಅಧಿಕಾರಿಗಳು ಮುಂದಾಗುತ್ತಿಲ್ಲ.

ಶೆಟ್ಟಿಗಲ್ಲಿ ತಿರುವಿನಲ್ಲಿ ತೆರೆದುಕೊಂಡಿರುವ ದೊಡ್ಡ ಮ್ಯಾನ್‌ಹೋಲ್‌ಗೆ ಪೊಲೀಸ್ ಬ್ಯಾರಿಕೇಡ್‌ನಿಂದ ಮುಚ್ಚಿದ್ದಾರೆ. ಇದರಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಬಡಕಲ್‌ಗಲ್ಲಿ ಮೂಲಕ ಹಳೇ ಬಸ್ ನಿಲ್ದಾಣ ಹಾಗೂ ಖಡೇ ಬಜಾರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ.

ರಾತ್ರಿ ಹೊತ್ತು ಇಲ್ಲಿ ಚರಂಡಿಯ ಮ್ನಾಹೋಲ್ ಇದೆ ಎನ್ನುವುದೇ ಸವಾರರಿಗೆ ಕಾಣುವುದಿಲ್ಲ. ಹಲವಾರು ಬೈಕ್ ಸವಾರರು ದುರಸ್ತಿಗೊಳ್ಳದ ಈ ಮ್ಯಾನ್‌ಹೋಲ್ ಬಳಿ ನಿಯಂತ್ರಣ ತಪ್ಪಿ ಬಿದ್ದು, ಗಾಯಗೊಂಡಿದ್ದಾರೆ. ಪಾಲಿಕೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಇದೇ ರಸ್ತೆಯಲ್ಲಿ ದಿನಂಪ್ರತಿ ಸಂಚರಿಸುತ್ತಾರೆ. ಆದರೂ ಚರಂಡಿ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶೆಟ್ಟಿಗಲ್ಲಿ ಸುತ್ತಮುತ್ತ ಚರಂಡಿ ಸ್ವಚ್ಛಗೊಳಿಸುತ್ತಿಲ್ಲ. ಹೀಗಾಗಿ ದಿನವೂ ಚರಂಡಿಯಿಂದ ದುರ್ವಾಸನೆ ಬರುತ್ತದೆ. ಚರಂಡಿ ಹದಗೆಟ್ಟ ಕಡೆಗಳಲ್ಲಿ ಪೊಲೀಸ್ ಬ್ಯಾರಿಕೇಡ್ ತಂದು ಮುಚ್ಚಳವನ್ನಾಗಿ ಬಳಕೆ ಮಾಡಲಾಗುತ್ತಿದೆ. ಪೊಲೀಸ್ ಬ್ಯಾರಿಕೇಡ್‌ಗಳು ಇರುವುದು ಚರಂಡಿ ಮುಚ್ಚುವುದಕ್ಕೋ? ತುರ್ತ ಸಂದರ್ಭಗಳಲ್ಲಿ ರಸ್ತೆಗಳಲ್ಲಿ ಭದ್ರತೆ ಕಲ್ಪಿಸುವುದಕ್ಕೋ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಅಪೂರ್ಣ ಕಾಮಗಾರಿ: ಕೆ.ಎಚ್.ಕಂಗ್ರಾಳಿ, ನಗರದ ಎಪಿಎಂಸಿ ರಸ್ತೆ, ಮಹಾವೀರ ವೃತ್ತ, ಹಳೇ ಪಿ.ಬಿ. ರಸ್ತೆ, ಅಲಾರವಾಡ ರಸ್ತೆ, ವಡಗಾವಿ ಸೇರಿ ಹಲವು ಕಡೆಗಳಲ್ಲಿ ಸ್ಮಾರ್ಟ್‌ಸಿಟಿ ಹಾಗೂ ಪಾಲಿಕೆಯಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಚರಂಡಿ ಕಾಮಗಾರಿಯೂ ಪ್ರಗತಿಯಲ್ಲಿದೆ. ಅನೇಕ ಕಡೆ ಚರಂಡಿ ತೆರದ ಸ್ಥಿಯಲ್ಲೇ ಇದ್ದು, ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಅವುಗಳನ್ನು ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಯಾವಾಗ ಅನುವು ಮಾಡಿಕೊಡುತ್ತಾರೋ ಏನೋ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಗರದಲ್ಲಿ ರಸ್ತೆ, ಚರಂಡಿ, ಒಳಚರಂಡಿಯಂತಹ ಮೂಲ ಸೌಕರ್ಯಗಳ ಸಮಸ್ಯೆ ಎದುರಾದರೆ ತಕ್ಷಣ ಸ್ಪಂದಿಸುತ್ತಿದ್ದೇವೆ. ಎಲ್ಲೆಲ್ಲಿ ತೆರೆದ ಚರಂಡಿ, ಒಳಚರಂಡಿಗಳು ಕೆಟ್ಟಿವೆಯೋ ಅವುಗಳನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ.| ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ