ಮಂಡ್ಯ ನಗರದ ಹೊಳಲು ವೃತ್ತದಲ್ಲಿ ಎಸ್.ಸಿ.ಮಧುಚಂದನ್ ನೇತೃತ್ವದಲ್ಲಿ ರೋಡ್ ಶೋ ನಡೆಸಲಾಯಿತು. 
ಜಿಲ್ಲೆ

ನಗರದಲ್ಲಿ ಗಮನಸೆಳೆದ ಬೃಹತ್ ಬೈಕ್ ರ‌್ಯಾಲಿ

ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಬೃಹತ್ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ಇದರೊಂದಿಗೆ ಕೆಲ ದಿನದಿಂದ ಪ್ರತಿ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಜನರ ಸಮಸ್ಯೆ ಆಲಿಸುತ್ತಿದ್ದ ಮಧುಚಂದನ್, ಬೈಕ್ ರ‌್ಯಾಲಿ ಮೂಲಕ ಮತಯಾಚನೆ ಮಾಡಿದರು.
ಗುತ್ತಲು ಬಡಾವಣೆಯ ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ದರ್ಶನ್ ವಿಶೇಷ ಪೂಜೆ ಸಲ್ಲಿಸಿ ರ‌್ಯಾಲಿಗೆ ಚಾಲನೆ ನೀಡಿದರು. 500ಕ್ಕೂ ಹೆಚ್ಚು ಬೈಕ್‌ಗಳಲ್ಲಿ ರ‌್ಯಾಲಿ ನಡೆಸುವ ಮೂಲಕ ರೈತಸಂಘದ ಮುಖಂಡರು ಮತ್ತು ಕಾರ್ಯಕರ್ತರು ಮಧುಚಂದನ್‌ಗೆ ಸಾಥ್ ನೀಡಿದರು. ದೇವಸ್ಥಾನದಿಂದ ಹೊರಟ ಬೈಕ್ ರ‌್ಯಾಲಿಯು ಗುತ್ತಲು ಬಡಾವಣೆ, ಬಿ.ಜಿ.ದಾಸೇಗೌಡ ವೃತ್ತದ(ಫ್ಯಾಕ್ಟರಿ ವೃತ್ತ) ಮೂಲಕ ಕಾಳಿಕಾಂಬ ದೇವಸ್ಥಾನ, ಹೊಳಲು ವೃತ್ತ, ಶಂಕರಮಠ, ಕಲ್ಲಹಳ್ಳಿ, ವಿ.ವಿ ನಗರ, ನೂರಡಿ ರಸ್ತೆ, ಕರ್ನಾಟಕ ಬಾರ್ ವೃತ್ತ, ವಿ.ವಿ ರಸ್ತೆ, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ತೆರೆದ ವಾಹನದಲ್ಲಿ ರೋಡ್ ಶೋ ನಡೆಸುತ್ತಿದ್ದ ನಾಯಕರಿಗೆ ಗುತ್ತಲು ಬಡಾವಣೆಯಲ್ಲಿ ಬೃಹತ್ ಗಾತ್ರದ ಹೂಮಾಲೆ ಹಾಕಿ, ಪುಷ್ಪವೃಷ್ಠಿ ಮಾಡಿ ಕಾರ್ಯಕರ್ತರು ಅಭಿನಂದಿಸಿದರು. ಕೆಲವು ರಸ್ತೆಗಳಲ್ಲಿ ಮಹಿಳೆಯರು ಮಧುಚಂದನ್ ಅವರಿಗೆ ಆರತಿ ಬೆಳಗಿ ಶುಭ ಕೋರಿದರು. ಮಾತ್ರವಲ್ಲದೆ ನೇಗಿಲು ಚಿಹ್ನೆಯಿಂದ ಬೃಹತ್ ಗಾತ್ರದ ಕೇಕ್ ಕತ್ತರಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ರವಿಕುಮಾರ್, ಹಾಲಹಳ್ಳಿ ಮಹೇಶ್, ವಿಜಯ್‌ಕುಮಾರ್ ಇತರರಿದ್ದರು. ದಾರಿಯುದ್ದಕ್ಕೂ ವಿವಿಧ ಮಾದರಿ ಹಾರಗಳನ್ನು ಹಾಕಲಾಯಿತು. ಸುಗಂಧರಾಜ ಸೇರಿದಂತೆ ವಿವಿಧ ಹೂವುಗಳಿಂದ ತಯಾರಿಸಿದ್ದ ಹೂವುಗಳು, ಈರುಳ್ಳಿ, ಗೆಡ್ಡೆಕೋಸು, ಅನಾನಾಸ್‌ನಿಂದ ತಯಾರಿಸಿದ ಹಾರಗಳನ್ನು ಹಾಕುವ ಮೂಲಕ ಗಮನ ಸೆಳೆದರು.