ಹಾಸನ: ನಗರದ ಎಲ್ಲ ಚರ್ಚ್‌ಗಳಲ್ಲಿ ಬುಧವಾರ ಯೇಸುವಿನಲ್ಲಿ ಪ್ರಾರ್ಥನೆ ಮಾಡಿ ಕ್ರಿಸ್‌ಮಸ್ ಸಂಭ್ರಮಾಚರಿಸಲಾಯಿತು. ಸಂಸದ ಶ್ರೇಯಸ್ ಪಟೇಲ್ ಅವರು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗೆವರೆಗೂ ಎಲ್ಲ ಚರ್ಚ್‌ಗಳಿಗೆ ಭೇಟಿ ನೀಡಿ ಸಮುದಾಯದವರಿಗೆ ಶುಭ ಕೋರಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಪಟೇಲ್, ಕ್ರಿಸ್ ಮಸ್ ಹಿಂದಿನ ದಿನ ರಾತ್ರಿ ಸಂತ ಫಿಲೋಮಿನ ಚರ್ಚ್‌ಗೆ ಹೋಗಿದ್ದು, ಬುಧವಾರದಂದು ವೆಸ್ಲಿ ಚರ್ಚ್‌ಗೆ ಬಂದಿದ್ದೇನೆ. ಇದೆ ರೀತಿ ಅನೇಕ ಚರ್ಚ್‌ಗೆ ಹೋಗಿ ಬಂದಿದ್ದೇನೆ. ಇವತ್ತು ಪವಿತ್ರ ದಿನವಾಗಿದೆ. ಹಾಸನ ಜಿಲ್ಲೆಯ ಜನತೆಗೆ ಕ್ರಿಸ್ ಮಸ್ ಹಬ್ಬದ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತೇನೆ. ಆ ಭಗವಂತ ಯೇಸು ಎಲ್ಲರಿಗೂ ಒಳ್ಳೆಯದು ಮಾಡಲಿ. ಉತ್ತಮ ಮಳೆ, ಬೆಳೆ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಯೇಸು ತಂದೆಯನ್ನು ನಂಬಿದ ಯಾರಿಗೂ ಕೂಡ ಮೋಸ ಆಗುವುದಿಲ್ಲ. ಎಲ್ಲರ ಕೈಹಿಡಿದಿದ್ದಾನೆ. ಆ ಭಗವಂತ ಯೇಸು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆರೈಸುತ್ತೇನೆ. ನಾನು ಚಿಕ್ಕ ವಯಸ್ಸಿನಿಂದಲೂ ಕ್ರೈಸ್ತ ಸಮುದಾಯದ ಶಾಲೆಯಲ್ಲಿ ಶಿಕ್ಷಣ ಪಡೆದಿರುವುದರಿಂದ ಕ್ರಿಸ್ ಮಸ್ ಹಬ್ಬ ಎಂದರೆ ನನಗೆ ಒಂದು ವಿಶೇಷವಾದ ಮತ್ತು ಮನಸ್ಸಿಗೆ ನೆಮ್ಮದಿ ಕೊಡುವ ದಿನವಾಗಿದೆ ಎಂದು ಹೇಳಿದರು.
ಮಂಗಳವಾರ ರಾತ್ರಿಯಿಂದಲೇ ಸಂಭ್ರಮ
ಪ್ರತಿ ವರ್ಷದಂತೆ ಈವರ್ಷವೂ ನಗರದ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷದ ಕ್ರಿಸ್‌ಮಸ್ ಸಂಭ್ರಮವನ್ನು ಮಂಗಳವಾರ ರಾತ್ರಿಯಿಂದಲೇ ನಗರದ ಎನ್.ಆರ್. ವೃತ್ತ, ಹಳೆ ಮುನ್ಸಿಪಲ್ ಶಾಲೆ ಹಿಂಭಾಗ, ಆರ್.ಸಿ. ರಸ್ತೆ ಬಳಿ ಇರುವ ಚರ್ಚ್, ಸ್ಲೇಟರ್ಸ್ ಹಾಲ್ ಇತರೆ ಭಾಗಗಳಲ್ಲಿ ಇರುವ ಇರುವ ಚರ್ಚ್‌ಗಳಲ್ಲಿ ಮಕ್ಕಳು ಮತ್ತು ದೊಡ್ಡವರು ಶುಭ್ರವಾದ ಹೊಸ ಬಟ್ಟೆ ತೊಟ್ಟು ಯೇಸುವಿನ ಮುಂದೆ ಮೇಣದ ಬತ್ತಿ ಇಟ್ಟು ಪ್ರಾರ್ಥಿಸುತ್ತಿದ್ದರು.
ಮಧ್ಯರಾತ್ರಿ 12 ಗಂಟೆಯಿಂದಲೇ ಬಹಳ ಹರ್ಷ ಹಾಗೂ ಪ್ರೀತಿಯಿಂದ ಯಾವ ಮತಬೇಧವಿಲ್ಲದೇ ಎಲ್ಲರೂ ಕೂಡ ಕ್ರಿಸ್‌ಮಸ್ ಹಬ್ಬ ಆಚರಿಸಿದರು. ಪ್ರಭು ಯೇಸುರವರ ಆರಾಧನೆ, ಬಲಿಪೂಜೆಗಳು ನಡೆದವು. ಹಾಸನದ ಸಂತ ಅಂತೋನಿ ಚರ್ಚ್‌ನಲ್ಲಿ ಮಂಗಳವಾರ ರಾತ್ರಿಯಿಂದಲೇ ಭಜನೆ ಗೀತೆಗಳ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಸಾವಿರಾರು ಜನರು ಭಾಗವಹಿಸಿದ್ದರು. ಚರ್ಚ್ ಆವರಣದಲ್ಲಿ ಯೇಸು ಅವರ ಜನನದ ಕುರಿತು ಕಥೆ ಬಿಂಬಿಸುವ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಯೇಸು ಅವರ ಬಾಲ್ಯದ ಜೀವನ ಹಾಗೂ ಉದ್ದೇಶಗಳನ್ನು ಸಾರುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಬಂದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.