ಜಿಲ್ಲೆ

ನಗರದಲ್ಲಿ ಕಸ ವಿಲೇವಾರಿಯದ್ದೇ ಸಮಸ್ಯೆ

ಚಾಮರಾಜನಗರ : ನಗರಸಭೆ ವ್ಯಾಪ್ತಿಯಲ್ಲಿ ಕಸವಿಲೇವಾರಿ ಸಮಸ್ಯೆ ನಿತ್ಯವೂ ತಲೆದೂರುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳು ಇದ್ದು, ಪ್ರತಿನಿತ್ಯವೂ 40 ಟನ್‌ಗಿಂತಲೂ ಹೆಚ್ಚಿನ ಕಸ ಸಂಗ್ರಹವಾಗುತ್ತದೆ. ಹೆಚ್ಚಿನ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ನಿರಂತರವಾಗಿ ಮರುಕಳಿಸುತ್ತಲೇ ಇದೆ. ಹಾಗಾಗಿಯೇ ನಗರದ ಪ್ರಮುಖ ವಾರ್ಡ್‌ಗಳ ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ, ರಸ್ತೆಗಳ ಇಕ್ಕೆಲ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹೆಚ್ಚಾಗಿ ಹರಡಿಕೊಂಡಿದೆ. ಎಲ್ಲೆಂದರಲ್ಲಿ ಅಶುಚಿತ್ವ ಕಾಣುತ್ತಿದ್ದು, ಇದರಿಂದಾಗಿ ಹಂದಿ, ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ದನಗಳು ಹಸಿ ತ್ಯಾಜ್ಯವನ್ನು ರಸ್ತೆಗೆ ಎಳೆದು ತಂದು ಬಿಸಾಡುತ್ತಿದ್ದು, ಎಲ್ಲೆಂದರಲ್ಲಿ ಗಬ್ಬು ನಾರುತ್ತಿವೆ. ತ್ಯಾಜ್ಯಗಳು ಕೊಳೆತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬದಲಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಕೆಲವು ವಾರ್ಡ್‌ಗಳಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳು ಸಾಗುವಾಗ ಏಕಾಏಕಿ ಅಡ್ಡಲಾಗಿ ಬರುತ್ತಿರುವ ನಾಯಿಗಳು ಹಾಗೂ ಹಂದಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ.

ನಗರದ ಗಾಳೀಪುರ ಬಡಾವಣೆ, ಸೋಮವಾರಪೇಟೆ ಬಡಾವಣೆ, ಕರಿನಂಜನಪುರ ರಸ್ತೆ, ನ್ಯಾಯಾಲಯದ ಸಮೀಪದ ರಸ್ತೆಗಳು, ಗುಂಡ್ಲುಪೇಟೆ ರಸ್ತೆ, ಉಪ್ಪಾರ ಮತ್ತು ನಾಯಕರ ಬಡಾವಣೆಗಳಲ್ಲಿ ಕಸ ಕೊಳೆತು ನಾರುತ್ತಿದೆ. ಇನ್ನು ಹೊರವಲಯದಲ್ಲಿರುವ ರಿಂಗ್ ರೋಡ್ ಬದಿ ಹಾಗೂ ಇನ್ನಿತರೆ ಹೆದ್ದಾರಿಗಳ ಬದಿಯಲ್ಲಿ ಹೆಚ್ಚಾಗಿ ಕಸ ಸುರಿಯಲಾಗುತ್ತಿದ್ದು, ಮೂಗುಮುಚ್ಚಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಕಸ ಚರಂಡಿಗೆ ಸೇರಿ ನೀರು ಸರಾಗವಾಗಿ ಹರಿಯಲು ಸಮಸ್ಯೆಯಾಗುತ್ತಿದೆ. ಕೆಲವು ಕಡೆ ಕಸ ಕೊಳೆತು ನಾರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಿಲೇವಾರಿಯಾಗದ ಕಸ:

ಪ್ರಸ್ತುತ ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗೆ 4 ಟ್ರ್ಯಾಕ್ಟರ್, 23 ಆಟೋ, 1 ಡೋಜರ್, 1 ಟಿಪ್ಪರ್, 1 ಆಂಬುಲೆನ್ಸ್ ಹಾಗೂ 2 ಜೆಸಿಬಿಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೂ ಕೆಟ್ಟು ನಿಲ್ಲುವ ಆಟೋಗಳಿಂದ ಹಾಗೂ ಹೆಚ್ಚಾಗುತ್ತಲೇ ಇರುವ ಜನಸಂಖ್ಯೆಯಿಂದ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಪರಿಣಾಮವಾಗಿ ಹಲವಾರು ಬಡಾವಣೆಗಳ ರಸ್ತೆಗಳ ಬದಿ, ಉದ್ಯಾನಗಳು, ಬಸ್‌ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಮನೆಗಳಿಂದ ಕಸ ಸಂಗ್ರಹ ಮಾಡುವ ಪೌರ ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿ ತೆರವು ಮಾಡದ ಪರಿಣಾಮ ಅನೈರ್ಮಲ್ಯ ಹೆಚ್ಚಾಗಿದೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ, ಮಾರಿಗುಡಿ ಸಮೀಪದ ರಸ್ತೆಗಳು, ಮಾರುಕಟ್ಟೆ ಸಮೀಪ, ಕುಲುಮೆ ರಸ್ತೆ, ಅಂಬೇಡ್ಕರ್ ಕಾಲೋನಿ, ಉಪ್ಪಾರ ಬಡಾವಣೆ ಹಾಗೂ ಇನ್ನಿತರೆ ಕಡೆಗಳಲ್ಲಿ ತ್ಯಾಜ್ಯದ ಸಮಸ್ಯೆ ಗಂಭೀರವಾಗಿದೆ.

ಆರೋಗ್ಯ ನಿರೀಕ್ಷಕರ ನಿರ್ಲಕ್ಷ್ಯ:

ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒರ್ವ ಆರೋಗ್ಯ ನಿರೀಕ್ಷಕನಿಗೆ 10 ವಾರ್ಡ್‌ಗಳಂತೆ ಹಂಚಿಕೆ ಮಾಡಿದ್ದು, 3 ಜನ ಆರೋಗ್ಯ ನಿರೀಕ್ಷಕರ ಹೊಂದಾಣಿಕೆ ಕೊರತೆಯಿಂದಲೂ ಕಸ ವಿಲೇವಾರಿ ಸಮಸ್ಯೆ ಕಂಡುಬರುತ್ತಿದೆ. ಆರೋಗ್ಯ ನಿರೀಕ್ಷಕರು ಸಾರ್ವಜನಿಕರು ಹಾಗೂ ನಗರಸಭೆಯ ಸದಸ್ಯರ ಕರೆಗಳನ್ನೇ ಸ್ವೀಕರಿಸದ ಪರಿಣಾಮವಾಗಿ ಸಮಸ್ಯೆ ಮರುಕಳಿಸುತ್ತಲೇ ಇದೆ. ಅಧಿಕಾರಿಗಳು ಪೌರಕಾರ್ಮಿಕರ ಕೊರತೆಯನ್ನು ಮುಂದಿಟ್ಟುಕೊಂಡು ಕಸವಿಲೇವಾರಿ ಸಮಸ್ಯೆಯನ್ನು ಸದಾ ಜೀವಂತವಾಗಿ ಇರಿಸುತ್ತಿದ್ದಾರೆ. ಕೆಲವು ವಾರ್ಡ್‌ಗಳಿಗೆ 2-3 ದಿನಗಳಾದರೂ ಕಸದ ವಾಹನವನ್ನು ಕಳಿಸದ ಪರಿಣಾಮ ಕಸ ಕೊಳೆತು ನಾರುವಂತಾಗಿದೆ. ಮನೆ-ಮನೆಗಳಲ್ಲಿ ಸಮರ್ಪಕವಾಗಿ ಕಸ ಸಂಗ್ರಹ ಮಾಡದೇ, ಅವು ರಸ್ತೆ ಬದಿ, ಚರಂಡಿಗಳಲ್ಲಿ ಸೇರುವಂತಾಗಿದೆ. ಪೌರಕಾರ್ಮಿಕರೆ ಜತೆ ಆರೋಗ್ಯ ನಿರೀಕ್ಷಕರು ಸಮನ್ವಯತೆ ಸಾಧಿಸದ ಹೊರತು, ಕಸ ವಿಲೇವಾರಿ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ.

ತೂಗುತೊಟ್ಟಿಗಳು ವ್ಯರ್ಥ: ನಗರದ ಪ್ರಮುಖವಾದ ಸಾರ್ವಜನಿಕ ಸ್ಥಳಗಳಲ್ಲಿ ಹಸಿ ಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಸಲುವಾಗಿ ತೂಗುತೊಟ್ಟಿಗಳನ್ನು ಅಳವಡಿಸಲಾಗಿತ್ತು. ಹೆಚ್ಚಿನ ಕಡೆಗಳಲ್ಲಿ ಅಳವಡಿಸಿದ್ದ ಪ್ಲಾಸ್ಟಿಕ್ ತೂಗುತೊಟ್ಟಿಗಳು ಕೆಲಸಕ್ಕೆ ಬಾರದೇ ಹಾಳಾಗಿದೆ. ಇತ್ತೀಚೆಗೆ ಸ್ಟೀಲ್ ತೊಟ್ಟಿಗಳನ್ನು ನಗರಸಭೆ ವತಿಯಿಂದ ಅಳವಡಿಸಿದ್ದು, ಇದರಿಂದ ಯಾವುದೇ ಪ್ರಯೋಜನವಾಗದೇ ವ್ಯರ್ಥವಾಗುತ್ತಿದೆ. ಒಮ್ಮೊಮ್ಮೆ ತೊಟ್ಟಿಗಳಲ್ಲಿ ಕಸ ಸಂಗ್ರಹವಾದರೂ ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಅಲ್ಲೇ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈಗಲಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಸ ವಿಲೇವಾರಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ. ಅದರಂತೆ 4 ವಾಹನಗಳು ಬಂದಿದ್ದು, ಕೆಟ್ಟು ಹೋಗಿದ್ದ ವಾಹನಗಳನ್ನು ರಿಪೇರಿ ಮಾಡಲಾಗಿದೆ. ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಸುರೇಶ್, ಅಧ್ಯಕ್ಷ, ನಗರಸಭೆ, ಚಾಮರಾಜನಗರ ನಗರಸಭೆ ವತಿಯಿಂದ ಸಮರ್ಪಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಆರೋಗ್ಯ ನಿರೀಕ್ಷಕರ ನಿರ್ಲಕ್ಷ್ಯವೇ ಇದಕ್ಕೆ ನೇರಕಾರಣವಾಗಿದೆ. ಅವರನ್ನು ಕೇಳಿದರೇ ಯಾವಾಗಲೂ ವಾಹನ ಕೆಟ್ಟು ಹೋಗಿದೆ ಎನ್ನುತ್ತಾರೆ. ಪರಿಣಾಮವಾಗಿ ಹಲವಾರು ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹವಾಗುತ್ತಿದೆ. ಶೂಭೋದಯ ಸಿದ್ದರಾಜು, ನಿವಾಸಿ, ಚಾಮರಾಜನಗರ