ಜಿಲ್ಲೆ

ನಗರದಲ್ಲಿ ಇತ್ತೀಚೆಗೆ ಭಾರೀ ಮಳೆ ನೂತನ ಬಡಾವಣೆಗೆ ಹುಡಾ ಆಯುಕ್ತ ರಮೇಶ್ ಭೇಟಿ

Hassan - Mohan Kanthur

ಹಾಸನ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗುತ್ತಿರುವ ನೂತನ ಬಡಾವಣೆಯ ಎಲ್ಲಾ ಕಡೆ ನೀರು ನಿಂತಿದ್ದು ಹುಡಾ ಆಯುಕ್ತ ರಮೇಶ್ ಅವರು ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಹೂರವಲಯದ ಬೂವನಹಳ್ಳಿ, ಸಂಕೇನಹಳ್ಳಿ ಸೇರಿ ಸುತ್ತಲಿನ ನಾಲ್ಕು ಗ್ರಾಮಗಳಿಂದ ಒಂದು ಸಾವಿರ ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಬಡಾವಣೆ ನಿರ್ಮಾಣಕ್ಕೆ ಹುಡಾ ಮುಂದಾಗಿದೆ. ಆದರೆ ಭಾರೀ ಮಳೆಯಿಂದ ನೀರು ನಿಂತಿರುವ ಹಿನ್ನಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ವಶಪಡಿಸಿಕೊಂಡು ನಾಲ್ಕು ವರ್ಷವಾದರೂ ಇನ್ನೂ ನಿವೇಶನ ಹಂಚಿಕೆಯಾಗಿಲ್ಲ. ರಾಜಕಾಲುವೆ ಇಲ್ಲ, ವೈಜ್ಞಾನಿಕ ರಸ್ತೆಯನ್ನೂ ಮಾಡಿಲ್ಲ. ಇಷ್ಟು ನಿಧಾನಗತಿಯಲ್ಲಿ ಕೆಲಸ ಮಾಡಿದರೆ ಹೇಗೆ ಎಂದು ಬೂವನಹಳ್ಳಿ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಹುಡಾ ಆಯುಕ್ತ ರಮೇಶ್ ಅವರು ಮಾತನಾಡಿ, ಏನೇನು ಕೆಲಸ ಆಗಬೇಕೆನ್ನುವುದನ್ನು ಹೇಳಿದರೆ ಖಂಡಿತ ಮಾಡಿಕೊಡುತ್ತೇವೆ. ಒಟ್ಟು 13,500 ನಿವೇಶನ ನಿರ್ಮಾಣವಾಗಲಿದ್ದು ಅದರಲ್ಲಿ 11,500 ನಿವೇಶನ ಗುರುತು ಮಾಡಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು. ಒಂದು ಸಾವಿರ ಎಕರೆ ಪೈಕಿ 120 ಎಕರೆ ಜಮೀನನ್ನು ರೈತರು ನಮಗೆ ನೀಡಿದ್ದಾರೆಯಾದರೂ ಸ್ವಲ್ಪ ಸಮಸ್ಯೆಯಿದೆ. ನಮಗೆ ಅವಾರ್ಡ್ ಆಗಿದ್ದು ಪೋಜಿಷನ್ ಮಾಡಲಾಗುತ್ತಿಲ್ಲ. ಅವರು ಹುಡಾ ವಿರುದ್ಧ ನ್ಯಾಯಾಲಯದ ಮೊರೆ ಹೋಗಿಲ್ಲ. ಜೊತೆಗೆ ಜಮೀನನ್ನು ಬಿಟ್ಟುಕೊಡುತ್ತಿಲ್ಲ. ಅವರಿಗೆ ಮೊದಲು ನಿವೇಶನ ನಿಗದಿಪಡಿಸಬೇಕಾಗುತ್ತದೆ. ಅವರೇನಾದರೂ ನಮ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರೆ ಮುಂಗಡ ಹಣವನ್ನು ಪಾವತಿಸಿ ಬಗೆಹರಿಸಿಕೊಳ್ಳಬೇಕು. ಈಗ ಡಿನೋಟಿಫೈ ಮಾಡಲು ಸಾಧ್ಯವಿಲ್ಲ. ಡಿನೋಟಿಫೈ ಮಾಡಿದವರೆಲ್ಲ ಜೈಲಿಗೆ ಹೋಗ್ತಿದಾರೆ. ನೀವು ಊಹಿಸಿರುವಂತೆ ಏನೂ ಆಗುವುದಿಲ್ಲ. ಧೈರ್ಯವಾಗಿರಿ ಎಂದು ಭರವಸೆ ನೀಡಿದರು.

ಆಗ ಮಾತನಾಡಿದ ರೈತರು, ನಾಲ್ಕು ವರ್ಷದಿಂದ ಕುಂಟುನೆಪ ಹೇಳಿಕೊಂಡು ಬರುತ್ತಿದ್ದೀರಿ. ಸ್ವಲ್ಪ ಮಳೆಯಾದರೂ ಸಮಸ್ಯೆಯಾಗುತ್ತದೆ. ಈಗಲೇ ಹೀಗಾದರೆ ಇಲ್ಲಿ ಮನೆ ಕಟ್ಟುವುದು ಹೇಗೆ ಎಂದು ಪ್ರಶ್ನಿಸಿದರು. ಹುಡಾ ಆಯುಕ್ತ ರಮೇಶ್ ಹಾಗು ಇಂಜಿನೀಯರ್‌ಗಳು ಮಳೆಯಿಂದ ಆಗಿರುವ ಅವಘಡಗಳ ಪರಿಶೀಲಿಸಿದರು.