ಹಾಸನ: ನಗರದ ಸಿಟಿ ಬಸ್ ನಿಲ್ದಾಣ ರಸ್ತೆಯ ಶ್ರೀ ಗಣೇಶೋತ್ಸವಕ್ಕೆ 70 ವರ್ಷ ತುಂಬಿದ್ದು, ಈ ಬಾರಿ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಉತ್ಸವ ನಡೆಸಲಾಗುವುದು ಎಂದು ಶ್ರೀ ಗಣಪತಿ ಸೇವಾ ಸಂಸ್ಥೆ ಅಧ್ಯಕ್ಷ ಡಾ.ಎಚ್. ನಾಗರಾಜು ತಿಳಿಸಿದರು.
ಸೆ.7 ರಂದು ಒಂಭತ್ತುವರೆ ಅಡಿ ಉದ್ದದ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಸೆ. 27ರ ವರೆಗೆ ಭಕ್ತಿ, ಆಗಮಿಕ, ಸಾಂಸ್ಕೃತಿಕ ಮೊದಲಾದ ಕಾರ್ಯಕ್ರಮ ನಿರಂತರವಾಗಿ ನಡೆಯಲಿವೆ ಎಂದು ವಿವರಿಸಿದರು. ಪ್ರತಿದಿನ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರಲಿದೆ. ಬೆಳಗಿನ ಪೂಜೆ ಮತ್ತು ಪ್ರಸಾದ ಸೇವೆಗಾಗಿ 5000 ರೂ.ನಿಗದಿಪಡಿಸಲಾಗಿದೆ. ಸಂಜೆ 6-7 ಮತ್ತು 7-9.30ರ ವರೆಗೆ 2 ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ. ವಿದ್ಯಾರ್ಥಿಗಳ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆ.15ರಂದು ಬೆಳಿಗ್ಗೆ ಶತ ರುದ್ರಾಭಿಷೇಕ ನೆರವೇರುವುದು. 22 ರಂದು ಶ್ರೀ ಮಹಾಗಣಪತಿ ಹೋಮ ನೆರವೇರುವುದು. ಸೆ.28 ರಂದು ಬೆಳಿಗ್ಗೆ 9:30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯುವ ಶ್ರೀ ಸ್ವರ್ಣಗೌರಿ ಸಹಿತ ಶ್ರೀ ಮಹಾಗಣಪತಿ ವಿದ್ಯುತ್ ದೀಪಾಲಂಕಾರ ಸಹಿತ ಪುಷ್ಪ ಮಂಟಪೋತ್ಸವದ ಮೆರವಣಿಗೆ ನಡೆಯಲಿದೆ. ಈ ಬಾರಿಯ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದರು.
ಅಂದು ಅಯೋಧ್ಯೆಯಲ್ಲಿ ನೆಲೆಗೊಂಡಿರುವ ಬಾಲರಾಮನ ವಿಗ್ರಹವನ್ನೂ ಮೆರವಣಿಗೆಯಲ್ಲಿ ಇಡಲಾಗುವುದು. ಮೆರವಣಿಗೆಯಲ್ಲಿ 25 ರಿಂದ 30 ಕಲಾ ತಂಡಗಳು ಭಾಗವಹಿಸಲಿವೆ. ಮೈಸೂರು ದಸರೆ ರೀತಿಯಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಸುಮಾರು 5 ಕಿ.ಮೀ ಪ್ರಮುಖ ಬೀದಿಗಳಲ್ಲಿ ಸಾಗಲಿವೆ ಎಂದು ಹೇಳಿದರು.
ಅಂದು ಸಂಜೆ 7.30ಕ್ಕೆ ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆ ಆಗಲಿದೆ ಎಂದ ಅವರು, ಅ.1 ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ಮಹಾಗಣಪತಿ ಮಹೋತ್ಸವ ಅಂಗವಾಗಿ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸುಮಾರು 10 ಸಾವಿರ ಮಂದಿ ಭಾಗಿಯಾಗಲಿದ್ದಾರೆ ಎಂದರು.
ಗಣಪತಿ ಸೇವಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚನ್ನವೀರಪ್ಪ ಮಾತನಾಡಿ, ಗಣಪತಿ ಉತ್ಸವ ಹಿಂದಿನಿಂದ ನಡೆದುಕೊಂಡು ಬಂದಿದ್ದು, ಮೈಸೂರು ದಸರೆ ಮಾದರಿ ನಮ್ಮೂರ ಗಣಪತಿ ಉತ್ಸವ ನಡೆಸಲು ಈಗಾಗಲೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದೊಂದು ಜಾತ್ಯಾತೀತ ಉತ್ಸವ ಎಂದರು.
ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿಗಳಾದ ಎಚ್.ಎಂ. ಸುರೇಶ್ ಕುಮಾರ್, ಲಲಾಟಮೂರ್ತಿ, ಎಂ.ಕೆ. ಕಮಲ್‌ಕುಮಾರ್ ಇದ್ದರು.