ಜಿಲ್ಲೆ

ನಗರದ ವಿಜಯ ಶಾಲೆಯಲ್ಲಿ ವಿಜಯ- ರಿಸರ್ಚ್ ಸೆಂಟರ್ ಪ್ರಾರಂಭ: ತಾರಾ ಎಸ್.ಸ್ವಾಮಿ

ಹಾಸನ: ರಾಜ್ಯದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಉತ್ತೇಜಿಸಲು ನಗರದ ವಿಜಯ ಶಾಲೆಯಲ್ಲಿ ಕಳೆದ ವರ್ಷದಿಂದ ವಿಜಯ- ರಿಸರ್ಚ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದು ಶಾಲೆಯ ಸಂಸ್ಥಾಪಕ ನಿರ್ದೇಶಕಿ ತಾರಾ ಎಸ್.ಸ್ವಾಮಿ ತಿಳಿಸಿದರು.
ಪ್ರಸ್ತುತ ಸಮಾಜದಲ್ಲಿ ಸಂಶೋಧನೆ, ನಾವೀನ್ಯತೆ, ಸೃಜನಶೀಲತೆ ಮತ್ತು ನಾಯಕತ್ವ ಕೌಶಲಗಳ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ.ಮೊದಲ ಬಾರಿಗೆ ವಿದ್ಯಾರ್ಥಿಗಳ ಮೂಲಕ ಸಂಶೋಧನೆ ನಡೆಸಲಾಗಿದೆ. ಮುಂದಿನ ಶಿಕ್ಷಣ ಏನಾಗಬಹುದು ಎನ್ನುವ ಕಲ್ಪನೆ ನಮಗೆ ಇರದು, ಇಂತಹ ಕಾಲಘಟ್ಟದಲ್ಲಿ ಸುಸ್ಥಿರ ಸಮಾಜ ನಿರ್ಮಾಣ ಆಗಬೇಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಾ.ಎಸ್. ಶ್ರೀಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಹರಿಪ್ರಸಾದ್ ಮತ್ತು ಸಮೃದ್ಧಿ ವಿ.ಅವರು 1,144 ವಿದ್ಯಾರ್ಥಿಗಳಿಂದ ಡೇಟಾ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ್ದಾರೆ. ಕೆ.ಹರಿಪ್ರಸಾದ್ ಇವರ ನಾಯಕತ್ವ ಗುಣ ಮತ್ತು ವಿಶ್ಲೇಷಣಾ ಕೌಶಲ ಶ್ಲಾಘನೀಯ. ಸಮೃದ್ಧಿ, ದತ್ತಾಂಶ ವಿಶ್ಲೇಷಣೆ ಮಾಡುವುದರಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದರು. ಈ ಅಧ್ಯಯನ ವಿದ್ಯಾರ್ಥಿಗಳ ಸಂಶೋಧನಾ ಕೌಶಲ ಹೆಚ್ಚಿಸುವ ಭರವಸೆ ಮೂಡಿಸಿದೆ. ಈ ರೀತಿಯ ಸಂಶೋಧನೆ ಎಲ್ಲಾ ಕಡೆ ನಡೆಯಬೇಕೆಂದರೆ ಶಾಲಾ ಆಡಳಿತ ಮಂಡಳಿ ಹಾಗೂ ಸರ್ಕಾರ ಮನಸ್ಸು ಮಾಡಬೇಕು ಎಂದರು.
ಡಾ.ಎಸ್. ಶ್ರೀಲಕ್ಷ್ಮೀ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಗುರುತಿಸುವ, ವಿಶ್ಲೇಷಣೆ ಮಾಡುವ ಮನೋಭಾವ ಬೆಳೆಸಿದ್ದಲ್ಲಿ, ಸುಸ್ಥಿರ ಸಮಾಜ ಮತ್ತು ದೇಶ ಕಟ್ಟುವ ಅವಶ್ಯಕತೆ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಸಲ್ಪವಾದರೂ ಧನಾತ್ಮಕ ಬದಲಾವಣೆ ತರಬಹುದು ಎಂಬ ಉದ್ದೇಶ ಸಂಶೋಧನೆ ಹಿಂದಿದೆ ಎಂದರು.
ವಿದ್ಯಾರ್ಥಿಗಳ ಸಂಶೋಧನೆಯಿಂದ ಶೇ.30 ರಷ್ಟು ವಿದ್ಯಾರ್ಥಿಗಳು, ಮೆಡಿಕಲ್, ಶೇ.21 ಮಂದಿ ಇಂಜಿನಿಯರಿಂಗ್ ಅಧ್ಯಯನದ ಆಸಕ್ತಿ ಹೊಂದಿದ್ದಾರೆ. ಉಳಿದ ಶೇ.50 ರಷ್ಟು ಮಕ್ಕಳು ವ್ಯವಹಾರ, ಹಣಕಾಸು ಮತ್ತು ಸಾರ್ವಜನಿಕ ಆಡಳಿತದಲ್ಲಿ ಒಲವು ಹೊಂದಿದ್ದಾರೆ. ಕೃಷಿ, ಕಲೆ, ಮಾನವೀಯ ಮತ್ತು ಕಾನೂನು ವಿಷಯಗಳ ಬಗ್ಗೆ ಕಡಿಮೆ ಆಸಕ್ತಿ ಹೊಂದಿರುವುದು ಒತ್ತಾಗಿದೆ ಎಂದರು.
ಅಲ್ಲದೆ ಈ ಸಂಶೋಧನೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಕಾಲೇಜುಗಳಿಗೆ ಸುಸ್ಥಿರ ಸಮಾಜ ಮತ್ತು ಸುಸ್ಥಿರ ದೇಶ ಕಟ್ಟಲು ವಿವಿಧ ವೃತ್ತಿಗಳ ಅಗತ್ಯತೆ ಬಗ್ಗೆ ಮಾಹಿತಿ ನೀಡಿದೆ. ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆ ಗುರುತಿಸಿ ಪ್ರೌಢಶಾಲಾ ಮಟ್ಟದಲ್ಲಿ ವೃತ್ತಿ ಕೌಶಲ ತರಬೇತಿ ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿ ಹೇಳುತ್ತದೆ. ಇಂತಹ ಸಂಶೋಧನೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದರೆ, ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿ ಹಲವು ವೃತ್ತಿ ಸಂಬಂಧಿತ ಕಾರ್ಯಕ್ರಮ ಪರಿಚಯಿಸಲು ಬೇಕಾದ ದತ್ತಾಂಶ (ಡೇಟಾ) ಒದಗಿಸುತ್ತವೆ. ಹಾಗೂ ಇದು ದೇಶಾದ್ಯಂತ ಕೌಶಲ ಅಭಿವೃದ್ಧಿ ಉತ್ತೇಜಿಸುತ್ತದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಶಾಲೆ ಮುಖ್ಯಸ್ಥ ಸುಬ್ಬಸ್ವಾಮಿ, ವಿದ್ಯಾರ್ಥಿ ಹರಿಪ್ರಸಾದ್ ಇದ್ದರು.