ಜಿಲ್ಲೆ

ನಗರದ ಮಾಸ್ಟರ್ಸ್ ಪಿಯು ಕಾಲೇಜು ಎದುರು ಪ್ರತಿಭಟನೆ

ಹಾಸನ: ನಗರದ ಮಾಸ್ಟರ್ಸ್ ಪಿಯು ಕಾಲೇಜಿನಲ್ಲಿ ಎರಡು ದಿನಗಳ ಹಿಂದೆ ಮುಸ್ಲಿಂ ಧರ್ಮಗುರುವೊಬ್ಬರು ಕುರಾನ್ ಪಠಣ ವೇಳೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕಾಲೇಜಿನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜ್ಞಾನ ದೇಗುಲ ಒಂದು ಧರ್ಮಕ್ಕೆ ಅಥವಾ ಒಂದು ಜಾತಿಗೆ ಸೀಮಿತವಾಗಬಾರದು, ಅದರಲ್ಲೂ ದೇಶ ವಿರೋಧಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ನಾಯಕರಿಂದ ವಿದ್ಯಾರ್ಥಿಗಳಿಗೆ ಭಾಷಣ ಮಾಡಿಸಿರುವುದು ತಪ್ಪು. ಕೂಡಲೇ ಅವರನ್ನು ಕಾಲೇಜಿಗೆ ಆಹ್ವಾನ ಮಾಡಿ ಭಾಷಣ ಮಾಡಿಸಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಸಂಘಟನೆಯ ಮುನೀರ್ ಅಹಮದ್ ವ್ಯಕ್ತಿಯನ್ನು ಕಾಲೇಜಿನಲ್ಲಿ ಮಕ್ಕಳಿಗೆ ಭಾಷಣ ಮಾಡಲು ಕರೆತಂದು ಹಿಂದೂ ಧರ್ಮದ ವಿರೋಧಿ ನೀತಿ ಬಗ್ಗೆ ಪ್ರವಚನ ಮಾಡಲು ಅವಕಾಶ ನೀಡಿರುವುದಕ್ಕೆ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಆಡಳಿತ ಮಂಡಳಿಯವರು ಹಿಂದೂ ಧರ್ಮದ ಹಬ್ಬಗಳಾದ ಶಿವರಾತ್ರಿ, ಬಸವ ಜಯಂತಿ, ಗಣೇಶೋತ್ಸವ ಸಂದರ್ಭದಲ್ಲಿ ಶಾಲೆಗೆ ರಜೆ ಕೊಡುವುದಿಲ್ಲ. ಆದರೆ ಮುಸ್ಲಿಂ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಸೆಲ್ಲರ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ಅಲ್ಲದೆ ಅವರನ್ನ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವಿಶೇಷ ರಿಯಾಯಿತಿ ನೀಡುತ್ತಾರೆ. ಕಾಲೇಜಿನವರ ಹಿಂದೂ ವಿರೋಧಿ ನೀತಿ ಖಂಡಿಸಲಾಗುವುದು. ಅಲ್ಲದೆ ಮುಸ್ಲಿಂ ಧರ್ಮಗುರು ಪೈಗಂಬರ ಪರವಾಗಿ ಘೋಷಣೆ ಕೂಗಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಆಡಳಿತ ಮಂಡಳಿಯವರು ಧರ್ಮ ಗುರುವನ್ನ ಕರೆದುಕೊಂಡು ಬಂದ ಉಪನ್ಯಾಸಕನ್ನ ಕಾಲೇಜಿನಿಂದ ಅಮಾನತು ಪಡಿಸಬೇಕು ಎಂದು ಪಟ್ಟು ಹಿಡಿದರು.ಈ ಸಂದರ್ಭದಲ್ಲಿ ಆಡಳಿತ ಆಡಳಿತ ಮಂಡಳಿಯವರು ಪ್ರತಿಭಟನಾಕಾರರ ಮನವೊಲಿಸಿ ಮುಂದೆ ಈ ರೀತಿ ತಪ್ಪುಗಳಾಗದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಆದರೆ ಪ್ರತಿಭಟನಾಕಾರರು ಎರಡು ದಿನ ಕಾಲಾವಕಾಶ ನೀಡುತ್ತೇವೆ ಮುಸ್ಲಿಂ ಧರ್ಮಗುರುವನ್ನ ಕರೆದುಕೊಂಡು ಬಂದ ಉಪನ್ಯಾಸಕನನ್ನ ಕರ್ತವ್ಯದಿಂದ ಅಮಾನತು ಪಡಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು
ಈ ಸಂದರ್ಭದಲ್ಲಿ ಎಬಿವಿಪಿ ನಗರ ಸಂಚಾಲಕ ದರ್ಶನ್, ಬಿಜೆಪಿ ಮುಖಂಡ ವೇಣುಗೋಪಾಲ್, ರಕ್ಷಿತ್ ಭಾರಧ್ವಜ್, ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ್ ಮೊದಲಾದವರಿದ್ದರು. ಪ್ರತಿಭಟನೆ ಹಿನ್ನೆಲೆ ಕಾಲೇಜು ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತು.