ಜಿಲ್ಲೆ

ನಗರದ ದೇಗುಲಗಳಲ್ಲಿ ಧನುರ್ಮಾಸ ಪೂಜೆ

ಚಿತ್ರದುರ್ಗ: ಪ್ರಸಕ್ತ ಸಾಲಿನ ಧನುರ್ಮಾಸ ವಿಶಿಷ್ಟವಾಗಿ ಆಚರಿಸಲು ನಗರದ ಶಿವ, ಗಣಪತಿ, ಶಕ್ತಿದೇವತೆಗಳು, ವೆಂಕಟೇಶ್ವರ, ಆಂಜನೇಯ ಸ್ವಾಮಿ ಸೇರಿ ಅನೇಕ ದೇಗುಲಗಳು ಸಜ್ಜಾಗಿದ್ದು, ಸೋಮವಾರ ಮೊದಲ ಪೂಜೆಯೂ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ದೇವರ ಮೂರ್ತಿಗಳಿಗೆ ಮುಂಜಾನೆ ಅಭಿಷೇಕ, ವಿಶೇಷ ಅಲಂಕಾರ ಸಮೇತ ಪೂಜೆ, ಪ್ರಾರ್ಥನೆ, ಮಹಾಮಂಗಳಾರತಿ ಸೇವೆ ಜರುಗಿತು. ಬೆಳಗ್ಗೆ 5.30ಕ್ಕೆ ಅನೇಕ ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇಲ್ಲಿನ ನವದುರ್ಗೆಯರಾದ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಕೋಟೆ ರಸ್ತೆಯ ಉಚ್ಚಂಗಿ ಯಲ್ಲಮ್ಮ, ಹೊಳಲ್ಕೆರೆ ರಸ್ತೆಯ ಬರಗೇರಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಮ್ಮ, ಚೌಡೇಶ್ವರಿ, ಕುಕ್ಕವಾಡೇಶ್ವರಿ ದೇವಿಗೆ ವಿವಿಧ ಬಗೆಯ ಪುಷ್ಪಗಳಿಂದ ಅರ್ಚಕರು ಅಲಂಕರಿಸಿದ್ದರು.

ದೇಗುಲಗಳಿಗೆ ಭೇಟಿ ನೀಡಿದ ನೂರಾರು ಭಕ್ತರು ದರ್ಶನ ಪಡೆದು, ಹೂವು, ಹಣ್ಣು, ಕಾಯಿಯೊಂದಿಗೆ ಭಕ್ತಿ ಸಮರ್ಪಿಸಿದರು.