ಹಾಸನ: ನಾಗರಿಕರು ಆರೋಗ್ಯದಿಂದಿರುವುದಕ್ಕೆ ಮೂಲ ಕಾರಣ ಪೌರ ಕಾರ್ಮಿಕರು. ಆದ್ದರಿಂದ ಅವರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಸಮಾಜದ್ದಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ ಹೇಳಿದರು.
ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ನಗರದ ರಾಜೀವ್ ಆಯುರ್ವೇದ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಸಹಯೋಗದಲ್ಲಿ ನಗರಸಭೆ ಸಹಕಾರದೊಂದಿಗೆ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾರಾಜ ಉದ್ಯಾನವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಸಹ ಒಂದು ರೀತಿಯ ಪ್ರಾತಃಸ್ಮರಣೀಯರು. ಅವರಿಲ್ಲದೆ ನಮ್ಮ ದಿನಚರಿ ಆರಂಭವಾಗುವುದಿಲ್ಲ. ನಿತ್ಯ ನಗರದ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಿದ್ದಾರೆ. ಸ್ವಚ್ಛ ಭಾರತ ನಿರ್ಮಾಣದಲ್ಲಿ ಅವರ ಪಾತ್ರ ಪ್ರಮುಖವಾದುದು. ಪೌರಕಾರ್ಮಿಕರ ದಿನದ ಅಂಗವಾಗಿ ಆಯೋಜಿಸಿರುವ ಆರೋಗ್ಯ ಶಿಬಿರದ ಪ್ರಯೋಜನ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಗಮನಹರಿಸಬೇಕು. ಅಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನೂ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಆರ್‌ಎಲ್ ಮೀಡಿಯಾ ಪ್ರಶಂಸೆ:
ವಿಜಯವಾಣಿ ನಂ.1 ಕನ್ನಡ ದಿನಪತ್ರಿಕೆ ಮತ್ತು ದಿಗ್ವಿಜಯ ಸುದ್ದಿವಾಹಿನಿ ಒಡೆತನದ ವಿಆರ್‌ಎಲ್ ಮೀಡಿಯಾ ಲಿಮಿಟೆಡ್ ಸಂಸ್ಥೆಯು ಸುದ್ದಿ ಪ್ರಸಾರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ರಾಜ್ಯದಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರ, ನೇತ್ರ ತಪಾಸಣಾ ಶಿಬಿರ, ಪರಿಸರ ಸಂರಕ್ಷಣೆ ಕಾರ್ಯ ಸೇರಿದಂತೆ ಹಲವಾರು ಜನೋಪಯೋಗಿ ಚಟುವಟಿಕೆಗಳ ಮೂಲಕ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಶಂಸಿಸಿದರು.
ದುಶ್ಚಟಗಳಿಗೆ ಬಲಿಯಾಗಬೇಡಿ:
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಮೋಹನ್ ಅವರು, ನಿತ್ಯ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರು ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಪೌರ ಕಾರ್ಮಿಕರು ಈ ಸಮಾಜಕ್ಕೆ ಎಷ್ಟು ಅಗತ್ಯ ಎಂಬುದನ್ನು ಬಿಂಬಿಸಲು ಪ್ರತಿವರ್ಷ ಸೆ.23 ರಂದು ಪೌರಕಾರ್ಮಿಕರ ದಿನ ಆಚರಿಸಲಾಗುತ್ತದೆ. ಪೌರ ಕಾರ್ಮಿಕರ ಕುರಿತ ಸಮಾಜದ ಕಾಳಜಿ ಈ ಒಂದು ದಿನಕ್ಕೆ ಸೀಮಿತವಾಗಬಾರದು. ಅದೇ ರೀತಿ ಪೌರ ಕಾರ್ಮಿಕರು ಸಹ ನಿಷ್ಠೆಯಿಂದ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಪೌರ ಕಾರ್ಮಿಕರನ್ನು ರಾಜ್ಯ ಸರ್ಕಾರಿ ನೌಕರರು ಎಂದು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ. ಪೌರಕಾರ್ಮಿಕರ ದಿನಕ್ಕೆ ಇದು ಸರ್ಕಾರ ನೀಡುತ್ತಿರುವ ಕೊಡುಗೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು. ದುಶ್ಚಟಗಳಿಗೆ ಬಲಿಯಾಗದೆ ಸ್ವಸ್ಥ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಋಣ ಸಂದಾಯದ ಅವಕಾಶ:
ರಾಜೀವ್ ಆಯುರ್ವೇದ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ. ನಿತಿನ್ ಮಾತನಾಡಿ, ಸಮಾಜಮುಖಿ ಕಾರ್ಯಗಳಿಗೆ ರಾಜೀವ್ ಆಸ್ಪತ್ರೆ ಸದಾ ನೆರವು ನೀಡುತ್ತಾ ಬಂದಿದೆ. ಅದರಲ್ಲೂ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಕಾರ್ಯವು ಅವರ ಋಣ ಸಂದಾಯ ಮಾಡಲು ಸಿಕ್ಕ ಅವಕಾಶ ಎಂದೇ ಭಾವಿಸಬೇಕಾಗುತ್ತದೆ. ಪೌರಕಾರ್ಮಿಕರು ಸಹ ಆರೋಗ್ಯ ಕುರಿತು ನಿರ್ಲಕ್ಷೃ ವಹಿಸದೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಯಾವ ವೃತ್ತಿಯು ಕೀಳಲ್ಲ:
ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ಪ್ರತಿಯೊಬ್ಬರು ತಮ್ಮ ವೃತ್ತಿ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಗತ್ಯ. ಯಾವುದೇ ವೃತ್ತಿಯು ಕೀಳಲ್ಲ. ಶ್ರದ್ಧೆಯಿಂದ ನಡೆಸುವ ಎಲ್ಲ ವೃತ್ತಿಗಳೂ ಶ್ರೇಷ್ಟ. ಆದ್ದರಿಂದ ಕೀಳರಮೆ ತೊರೆದು ಸೇವೆಯಲ್ಲಿ ತೊಡಗಿಕೊಳ್ಳಬೇಕು. ಪೌರ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕ ಮರಣ ಹೊಂದಿರುವುದರಿಂದ ಸೇವಾವಧಿ ಮುಗಿಸುವುದೇ ಕಷ್ಟ ಎನ್ನುವಂತಾಗಿದೆ. ಆದ್ದರಿಂದ ಆರೋಗ್ಯದ ಕಡೆಯು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ಮತ್ತು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಯೋಗಣ್ಣ ಉಪಸ್ಥಿರಿದ್ದು ಮಾತನಾಡಿದರು. ನಗರಸಭೆ ಆರೋಗ್ಯ ನಿರೀಕ್ಷಕ ಪ್ರಸಾದ್ ಸ್ವಾಗತಿಸಿದರು.
ರಕ್ತ ಪರೀಕ್ಷೆ ಮೂಲಕ ಉದ್ಘಾಟನೆ:
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ, ನಗರಸಭೆ ಅಧ್ಯಕ್ಷ ಮೋಹನ್ ಮತ್ತು ಪೌರಾಯುಕ್ತ ಪರಮೇಶ್ವರಪ್ಪ ಅವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ರಾಜೀವ್ ಆಯುರ್ವೇದ ವೈದ್ಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ. ನಿತಿನ್ ನೇತೃತ್ವದಲ್ಲಿ ಡಾ. ಉದಯ ಗಣೇಶ್, ಡಾ. ಗೋವರ್ಧನ್ ಬೆಳಗುಲಿ, ಡಾ. ಎಂ.ಎಸ್. ಪ್ರದೀಪ್, ಡಾ. ಕೆ.ಎನ್. ಶಿಲ್ಪಾ ಮತ್ತು ಡಾ. ದೀಪಶ್ರೀ ಅವರನ್ನೊಳಗೊಂಡ ತಂಡವು ಸುಮಾರು 200 ಕ್ಕೂ ಹೆಚ್ಚಿನ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿತು. ಅತಿಥಿಗಳು ಗುಂಡು ಎಸೆಯುವ ಮೂಲಕ ಪೌರಕಾರ್ಮಿಕರ ಕ್ರೀಡಾಕೂಟಕ್ಕೂ ಚಾಲನೆ ನೀಡಿದರು.