ಅವಿನಾಶ್ ಜೈನಹಳ್ಳಿ ಮೈಸೂರು
ಮಹಾನಗರ ಪಾಲಿಕೆಯಿಂದ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಗಳನ್ನು ಅನುದಾನ ಬಿಡುಗಡೆ ಆಗುವವರೆಗೂ ಕೈಗೊಳ್ಳಬಾರದು ಎಂದು ಪೌರಾಡಳಿತ ನಿರ್ದೇಶನಾಲಯದಿಂದ ನಿರ್ದೇಶನ ನೀಡಲಾಗಿದ್ದು, ಇದರಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಸ್ಥಳೀಯ ಸಂಸ್ಥೆಯಲ್ಲಿ ಚುನಾಯಿತ ಕೌನ್ಸಿಲ್ ಇಲ್ಲದಿರುವ ಕಾರಣ ನೀಡಿ ಅನುದಾನ ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ. ಇದು ಅಭಿವೃದ್ಧಿ ಕಾಮಗಾರಿಗಳ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಅನುದಾನ ಲಭ್ಯತೆಯ ಬಗ್ಗೆ ಆತಂಕ ಮನೆ ಮಾಡಿದೆ. ಇದು ಅಧಿಕಾರಿಗಳ ತಲೆನೋವಿಗೂ ಕಾರಣವಾಗಿದೆ.
ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಯೋಜನಾ ನಿರ್ದೇಶಕರ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಕೌನ್ಸಿಲ್ ಅಥವಾ ಚುನಾಯಿತ ಸದಸ್ಯರು ಇಲ್ಲದಿರುವುದರಿಂದಾಗಿ 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಮಾರ್ಗಸೂಚಿಯ ಅನ್ವಯ ಅರ್ಹತೆ ಇಲ್ಲ. ಆದ್ದರಿಂದ ಈ 43 ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗದಿರಬಹುದು. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಯನ್ನು ಅನುದಾನ ಬಿಡುಗಡೆ ಆಗುವರೆಗೂ ಕೈಗೊಳ್ಳದಂತೆ ನಿರ್ದೇಶನಾಲಯ ತಿಳಿಸಿದೆ.
ಚುನಾವಣೆ ನಡೆದಿಲ್ಲದಿರುವ ಬೋಗಾದಿ, ಕಡಕೊಳ, ರಮ್ಮನಹಳ್ಳಿ ಮತ್ತು ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳು ಮತ್ತು ಹೂಟಗಳ್ಳಿ ನಗರಸಭೆಗೂ ಇದು ಅನ್ವಯವಾಗಲಿದೆ. 15ನೇ ಹಣಕಾಸು ಆಯೋಗದ ಅನುದಾನ ಸರಾಸರಿ 60 ಕೋಟಿ ರೂಪಾಯಿಗೂ ಹೆಚ್ಚು ಕೊಡಲಾಗುತ್ತಿತ್ತು. ಅದನ್ನು ಒಳಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಉದ್ಯಾನಗಳು ಹಾಗೂ ಬೀದಿದೀಪಗಳ ನಿರ್ವಹಣೆ ಮೊದಲಾದ ಕೆಲಸಗಳಿಗೆ ಬಳಸಲಾಗುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಅದು ಸಿಗದಿರುವುದು ಕಾರ್ಯ ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಮಾಜಿ ಮೇಯರ್ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಚುನಾವಣೆಯನ್ನು ನಡೆಸದೆ ರಾಜ್ಯ ಸರ್ಕಾರದ ನಿರ್ಲಕ್ಷೃದ ಕಾರಣ ಅನುದಾನ ದೊರೆಯದಂತಾಗಿದೆ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗಲಿದ್ದು, ಜನರಿಗೆ ಅನ್ಯಾಯವಾಗುತ್ತದೆ. ಇದರ ಹೊಣೆಯುನ್ನು ಸರ್ಕಾರವೇ ಹೊರಬೇಕು. ಒಂದೆಡೆ ಜನಪ್ರತಿನಿಧಿಗಳಿಲ್ಲ, ಇನ್ನೊಂದೆಡೆ ಕೇಂದ್ರದ ಅನುದಾನ ದೊರೆಯದಂತಹ ಸ್ಥಿತಿ ಎದುರಾಗಿದೆ. ಇದು, ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ತೊಡಕಾಗಿ ಪರಿಣಮಿಸಲಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
65 ವಾರ್ಡ್‌ಗಳನ್ನು ಹೊಂದಿರುವ ಮಹಾನಗರಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅಧಿಕಾರದ ಅವಧಿ 2023ರ ನ.16ರಂದು ಕೊನೆಗೊಂಡಿದೆ. ಈವರೆಗೂ ಚುನಾವಣೆ ನಡೆದಿಲ್ಲ. ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018 ರಂದು ಚುನಾವಣೆ ನಡೆಯಿತು. ನವೆಂಬರ್ 17 ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹಾಗಾಗಿ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಂಡಿತು. ರಾಜ್ಯ ಸರ್ಕಾರ ಜನವರಿ ಅಥವಾ ಫೆಬ್ರವರಿಯಲ್ಲಿ ಚುನಾವಣೆ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ ನಗರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ನಗರಪಾಲಿಕೆ ಚುನಾವಣೆ ಕುರಿತು ಆಸಕ್ತಿ ತೋರದೆ ಇರುವುದು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದವರಲ್ಲಿ ನಿರಾಶೆ ಮೂಡಿಸಿದೆ. ಜತೆಗೆ ಅಭಿವೃದ್ಧಿಗೂ ಹಿನ್ನಡೆಯಾಗಿದೆ.
ಕಳೆದ ಬಾರಿ ಮತದಾರ ಯಾವುದೇ ಪಕ್ಷಗಳಿಗೂ ಸ್ಪಷ್ಟವಾದ ಬಹುಮತ ನೀಡಲಿಲ್ಲ. ಹೀಗಾಗಿ ಆರಂಭದ ಎರಡು ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತ ನಡೆಸಿದರೆ ನಂತರದ ಎರಡು ಅವಧಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಆಡಳಿತ ನಡೆಸಿತು. 65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 20, ಜೆಡಿಎಸ್ 17, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು.
ಕಳೆದ ಬಾರಿ ನಗರ ಪಾಲಿಕೆಯ ಕ್ಷೇತ್ರ ಮರುವಿಂಗಡಣೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ನಗರ ಪಾಲಿಕೆ ಚುನಾವಣೆಯಲ್ಲಿ ಕ್ಷೇತ್ರ ಮರುವಿಂಗಡಣೆಯಾಗುವ ಸಾಧ್ಯತೆ ಇಲ್ಲ. ನೇರವಾಗಿ ಪ್ರತಿ ವಾರ್ಡ್‌ಗೆ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ನಗರ ಪಾಲಿಕೆ ವ್ಯಾಪ್ತಿಗೆ ಕೆಲವು ಮುಡಾ ಬಡಾವಣೆಗಳು ಸೇರ್ಪಡೆಯಾಗಿದ್ದು, ಈ ಹೊಸ ಬಡಾವಣೆಗಳನ್ನು ಅಕ್ಕಪಕ್ಕದ ವಾರ್ಡ್‌ಗಳಿಗೆ ಸೇರಿಸಿ ಚುನಾವಣೆ ನಡೆಸುವ ಸಾಧ್ಯತೆ ಇದೆ. ನಗರಪಾಲಿಕೆಗೆ ಸಕಾಲದಲ್ಲಿ ಚುನಾವಣೆ ನಡೆಸದೆ ಹೋದರೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಮೈಸೂರು ಸೇರಿದಂತೆ ರಾಜ್ಯದ 43 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಕೌನ್ಸಿಲ್ ಅಥವಾ ಚುನಾಯಿತ ಸದಸ್ಯರು ಇಲ್ಲದಿರುವುದರಿಂದ 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನ ಪಡೆಯಲು ಮಾರ್ಗಸೂಚಿಯ ಅನ್ವಯ ಅರ್ಹರಾಗಿರುವುದಿಲ್ಲ. ಆದ್ದರಿಂದ 43 ನಗರ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಆಗದಿರಬಹುದು. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿಯನ್ನು ಅನುದಾನ ಬಿಡುಗಡೆ ಆಗುವರೆಗೂ ಕೈಗೊಳ್ಳದಂತೆ ಪೌರಾಡಳಿತ ನಿರ್ದೇಶನಾಲಯ ನಿರ್ದೇಶಿಸಿದೆ. ಶಿವಕುಮಾರ್, ಮಾಜಿ ಮೇಯರ್