ಬೇಲೂರು: ನಗರ ಬೆಳೆದಂತೆ ಕಸ ಹೆಚ್ಚಾಗುತ್ತದೆ. ಹೆಚ್ಚಾದ ಕಸವನ್ನು ವಿಲೇವಾರಿ ಮಾಡಲು ಪುರಸಭೆಗೆ ವಾಹನದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಕಸ ಸಂಗ್ರಹಣೆಗೆ ಹೊಸ ವಾಹನ ಖರೀದಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಹೇಳಿದರು.
ಪುರಸಭೆ ಮುಂಭಾಗ ಶುಕ್ರವಾರ ನೂತನ ವಾಹನಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ 40 ಲಕ್ಷ ರೂ. ವೆಚ್ಚದಲ್ಲಿ ಎರಡು ಟ್ರ್ಯಾಕ್ಟರ್, ಒಂದು ಟಿಪ್ಪರ್ ಖರೀದಿಸಲಾಗಿದೆ. ಬೇಲೂರು ಪಟ್ಟಣ ಬೆಳೆದಂತೆ ಜನಸಂಖ್ಯೆಯು ಹೆಚ್ಚುತ್ತ ಹೋಗುತ್ತಿದೆ. ಜನ ಸಂಖ್ಯೆ ಹೆಚ್ಚಾದಂತೆ ಮನೆಯಲ್ಲಿ ಕಸವೂ ಹೆಚ್ಚಾಗುತ್ತದೆ. ನಮ್ಮ ಪುರಸಭೆಯಲ್ಲಿ ಎರಡು ಟ್ರಾೃಕ್ಟರ್, ಒಂದು ಟಿಪ್ಪರ್ ಮಾತ್ರ ಇತ್ತು. ಇದರಿಂದ ಕಸ ಸಂಗ್ರಹಣೆಗೆ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ವಾಹನಗಳನ್ನು ಖರೀದಿಸಲಾಗಿದೆ. ಅಲ್ಲದೆ ಪುರಸಭೆ ವ್ಯಾಪ್ತಿಯಲ್ಲಿನ ನಾಗರಿಕರು ನಿಮ್ಮ ಮನೆ ಮುಂದೆ ಬರುವ ಕಸದ ಟಿಪ್ಪರ್ ವಾಹನಕ್ಕೆ ಕಸವನ್ನು ಹಾಕಿ ನಗರವನ್ನು ಸ್ವಚ್ಛವಾಗಿಡಲು ಸಹಕಾರ ನೀಡುವ ಮೂಲಕ ಪಟ್ಟಣವನ್ನು ಸುಂದರವಾಗಿ ಕಾಣುವಂತೆ ಮಾಡಲು ಮುಂದಾಗಬೇಕು ಎಂದರು.
ಪುರಸಭೆ ಮುಖ್ಯಧಿಕಾರಿ ಸುಜಯ್ ಕುಮಾರ್ ಮಾತನಾಡಿ, ಮನೆಯಲ್ಲಿ ಹಸಿ ಕಸ, ಒಣ ಕಸ ಬೆರ್ಪಡಿಸಿ ವಾರಕ್ಕೆ ಎರಡು ದಿನ ಒಣ ಕಸ, ಮೂರು ದಿನ ಹಸಿ ಕಸವನ್ನು ಬೇರ್ಪಡಿಸಿ ಆಟೋ ಟಿಪ್ಪರ್‌ಗಳಿಗೆ ಹಾಕಬೇಕು. ಎಲ್ಲೆಂದರಲ್ಲಿ ಕಸ ಹಾಕಬಾರದು. ಪಟ್ಟಣದಲ್ಲಿ ಸಂಗ್ರಹಿಸಿದ ಕಸವನ್ನು ಸಮೀಪವಿರುವ ಘನ ತ್ಯಾಜ್ಯ ಘಟಕದಲ್ಲಿ ವಿಂಗಡಿಸಿ, ಕರಗಿಸಿ ಗೊಬ್ಬರ ಮಾಡಲಾಗುತ್ತದೆ. ಒಂದು ಕೆಜಿ ಗೊಬ್ಬರಕ್ಕೆ ಐದು ರೂ.ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.
ಪುರಸಭೆ ಸದಸ್ಯರಾದ ಜಗದೀಶ್, ಜಮಾಲೂದ್ದೀನ್, ಅಶೋಕ್ ಸೇರಿದಂತೆ ಸಿಬ್ಬಂದಿ ಇದ್ದರು.