ಹಾಸನ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಜೋರು ಮಳೆ ಸುರಿದಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ರಾಜ್ಯ ಹವಾಮಾನ ಇಲಾಖೆ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದ್ದು, ಇನ್ನೂ ಹೆಚ್ಚಿನ ಮಳೆಯಾಗುವು ನಿರೀಕ್ಷೆ ಇದೆ.
ನಗರದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ವಾಪಸ್ ಮನೆಗೆ ಹೋಗುವ ವೇಳೆ ಜೋರು ಮಳೆ ಬಂದಿದ್ದರಿಂದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬೈಕ್ ಸವಾರರು, ಪಾದಚಾರಿಗಳು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದರು.
ಸಕಲೇಶಪುರ ತಾಲ್ಲೂಕು ಭಾಗದ ವಿವಿಧೆಡೆ ಗುಡುಗು ಸಹಿತ ಜೋರು ಮಳೆಯಾಗಿದ್ದು, ಕೃಷಿ ಚುಟುವಟಿಕೆಗಳಿಗೆ ಅನುಕೂಲವಾಗಿದೆ. ಆದರೆ, ನಗರ ಪ್ರದೇಶದಲ್ಲಿ ಸುರಿದ ಜೋರು ಮಳೆಯಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರಿಂದ ಜನರು ಸಿಕ್ಕ ಸಿಕ್ಕ ಅಂಗಡಿ ಮಳಿಗೆಗಳ ಕೆಳಗೆ ನಿಂತು ಆಶ್ರಯ ಪಡೆದರು. ಆಲೂರು ತಾಲ್ಲೂಕು ಭಾಗದಲ್ಲಿ ಮಳೆ ಸುರಿದಿದ್ದರಿಂದ ಜೋಳ ಒಣ ಹಾಕಿದ್ದ ರೈತರು ಪರದಾಡುವಂತಾಯಿತು.
ಕಳೆದ ಒಂದು ತಿಂಗಳಿಂದ ಚನ್ನರಾಯಪಟ್ಟಣ, ಅರಸೀಕೆರೆ ತಾಲ್ಲೂಕು ಹೊರತುಪಡಿಸಿ ಉಳಿದೆಲ್ಲೆಡೆ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮಲೆನಾಡು- ಅರೆ ಮಲೆನಾಡು ಭಾಗದಲ್ಲೂ ಜಮೀನು ಉಳುಮೆ ಕಾರ್ಯ ಬಿರುಸುಗೊಂಡಿದೆ.