ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ನಗರಸಭೆ ಅಧ್ಯಕ್ಷರು ಮತ್ತು ಶಾಸಕರ ಗಮನಕ್ಕೆ ತರದೆ ಅಂಗಡಿಗಳನ್ನು ತೆರವು ಮಾಡಿರುವ ಕ್ರಮ ಖಂಡನೀಯವಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಆಗಬೇಕು ಎಂದು ನಗರಸಭಾ ಸದಸ್ಯರು ಒತ್ತಾಯಿಸಿದರು.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಅಧ್ಯಕ್ಷ ಎಂ. ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ದಿನದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಮೋಹನ್, ಸಿ.ಆರ್. ಶಂಕರ್ ಮತ್ತು ಯೋಗೇಂದ್ರ ಬಾಬು ಅವರು ನಗರಸಭೆ ಆಯುಕ್ತರು ಯಾವ ಕಾರಣಕ್ಕಾಗಿ ಅಮಾಯಕ ವರ್ತಕರ ಮೇಲೆ ಈ ರೀತಿ ಮಾಡಿದ್ದಾರೆ ಮತ್ತು ಇದಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸದಸ್ಯ ಗಿರೀಶ್ ಚನ್ನವೀರಪ್ಪ ಮಾತನಾಡಿ, ಶಾಸಕರು ಮತ್ತು ಅಧ್ಯಕ್ಷರ ಗಮನಕ್ಕೆ ತರದೆ ಅವರಿಗೆ ಗೌರವವನ್ನು ಕೂಡ ನೀಡಿಲ್ಲ. ಸೌಜನ್ಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಪರಿಶೀಲಿಸುವ ಕಾರ್ಯವನ್ನು ಕೂಡ ಮಾಡಿಲ್ಲ. ಜಿಲ್ಲಾಧಿಕಾರಿಗಳು ಮೌಖಿಕವಾಗಿ ಹೇಳಿದ್ದರು ಎಂಬ ಹೇಳಿಕೆ ನೀಡುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಈ ಹೇಳಿಕೆಯನ್ನು ನೀಡಿಲ್ಲ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ರೇವಣ್ಣ ಅವರು ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಾರದೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಹೋಗಿದ್ದಾರೆ ಎಂದು ಆಯುಕ್ತ ನರಸಿಂಹಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾರನೇ ದಿನ ರಜೆ ಇದ್ದರೂ ಕೂಡ ನಗರಸಭೆ ಅಧಿಕಾರಿಗಳು, ಸಂಸದರು ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿಗೆ ಎಲ್ಲರೂ ಭೇಟಿ ನೀಡುತ್ತಾರೆ. ಇಲ್ಲಿ ಆಯುಕ್ತರು ರಾಜಕಾರಣ ಮಾಡಲು ಬಂದಿದ್ದಾರೆ ಮತ್ತು ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಇದರ ಹಿಂದೆ ಹುನ್ನಾರವಿದೆ ಎಂದು ಆರೋಪಿಸಿದರು.
ಇದಕ್ಕೆ ಶಾಸಕ ಎಚ್.ಪಿ.ಸ್ವರೂಪ್ ಧ್ವನಿಗೂಡಿಸಿ ಅಮಾಯಕರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಯಾರ ಗಮನಕ್ಕೂ ಬಾರದೆ ಏಕಾಏಕಿ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಈಗ ಅಲ್ಲಿಯ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ನನಗೆ ಗೌರವ ಕೊಡಲಿಲ್ಲ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಆಯುಕ್ತ ನರಸಿಂಹಮೂರ್ತಿ ಮಾತನಾಡಿ, ಯಾವುದೇ ರಾಜಕೀಯ ದುರುದ್ದೇಶದಿಂದ ನಾವು ಈ ಕಾರ್ಯಾಚರಣೆ ಮಾಡಿಲ್ಲ ಮತ್ತು ಕೆಲ ಅಧಿಕಾರಿಗಳು ವೈಯಕ್ತಿಕ ಉದ್ದೇಶವನಿಟ್ಟುಕೊಂಡು ಈ ರೀತಿ ಮಾಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಆಗ ಸದಸ್ಯರು ಆಯುಕ್ತರ ವಿರುದ್ಧ ಮುಗಿಬಿದ್ದರೂ ಯಾರು ಆ ಅಧಿಕಾರಿ. ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಸಾರ್ವಜನಿಕರೊಂದಿಗೆ ಚೆಲ್ಲಾಟವಾಡಿದ್ದಾರೆ ಅವರ ವಿರುದ್ಧ ಶಿಸ್ತುಕ್ರಮ ಆಗಲೇಬೇಕು. ಕಾರ್ಯಾಚರಣೆಗೆ ಭಾಗವಹಿಸಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ಸಭೆಯ ಮುಂದೆ ಬರಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ ವಿಧವೆ ಮಹಿಳೆಯ ಮನೆಯ ಮೆಟ್ಟಿಲನ್ನು ಕೆಡವಿದ್ದಾರೆ. ನೀಲಕಂಠ ಎಂಬುವವರೇ ತೆರವು ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆತನನ್ನು ಕರೆಯಿರಿ ಎಂದು ಆಗ್ರಹಿಸಿದರು ನಂತರ ಆಯುಕ್ತರು ಈ ಕಾರ್ಯಾಚಣೆಯಲ್ಲಿ ಭಾಗವಹಿಸಿದ್ದಂತಹ ಎಲ್ಲರೂ ಬರುವಂತೆ ತಿಳಿಸಿದರು.
ನಂತರ ಸಭೆಗೆ ಬಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೋಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ ಶಾಸಕರು ಮಧ್ಯಪ್ರವೇಶಿಸಿ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೀತಿಯಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ನಂತರ ನಗರಸಭೆ ಸದಸ್ಯ ಸಿ.ಆರ್.ಶಂಕರ್ ಮಾತನಾಡಿ, ಹಂದಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ಹಿಡಿಯುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕೆಲವರು ಧ್ವನಿಗೂಡಿಸಿ ಹಂದಿ, ಕುದುರೆ ಮತ್ತು ನಾಯಿ ಹಾಗೂ ಜಾನುವಾರುಗಳ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು
ಇದಕ್ಕೆ ಉತ್ತರಿಸಿದ ಪರಿಸರ ಇಲಾಖೆಯ ಇಂಜಿನಿಯರ್ ವೆಂಕಟೇಶ್, ಹಂದಿ ಮಾಂಸದಂಗಡಿ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಹಂದಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾಕಣೆ ಮಾಡುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದಂತೆ ಈಗಾಗಲೇ 1800 ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿದೆ. ಇನ್ನೂ 500 ನಾಯಿಗಳು ಬಾಕಿ ಉಳಿದುಕೊಂಡಿವೆ. ಅವುಗಳಿಗೂ ಕೂಡ ಶೀಘ್ರದಲ್ಲೇ ಸಂತಾನಹರಣ ಚಿಕಿತ್ಸೆ ಮಾಡಲಾಗುವುದೆಂದು ಹೇಳಿದರು.
ಸದಸ್ಯ ಯೋಗೇಂದ್ರ ಬಾಬು ಮಾತನಾಡಿ, ಸಭೆಯ ಅಜೆಂಡಾದಲ್ಲಿ ನನ್ನ ವಿಷಯವನ್ನು ದಾಖಲಿಸುವಂತೆ ಹೇಳಿದ್ದೆ. ಆದರೆ ನನ್ನ ವಿಷಯಗಳು ಪುಸ್ತಕದಲ್ಲಿಲ್ಲ. ದುರುದ್ದೇಶದಿಂದ ಹೀಗೆ ಮಾಡಲಾಗಿದೆ. ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜು ಅಕ್ರಮವಾಗಿ ನಗರಸಭೆ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದೆ. ಆದರೆ ಯಾವ ಪ್ರಭಾವಕ್ಕೆ ಒಳಗಾಗಿ ಇವರು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ ಇದರ ಬಗ್ಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ದಾಖಲಾತಿಗಳನ್ನು ಪರಿಶೀಲಿಸುವಂತೆ ಹಾಗೂ ಕಟ್ಟಡ ಕಟ್ಟಲು ಅನುಮತಿ ಪಡೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಸದಸ್ಯರ ನಡುವೆ ಕಿತ್ತಾಟ
ಸಭೆಯಲ್ಲಿ ವಿಷಯವಾರು ಚರ್ಚೆಯಾಗದೆ ಕೆಲವರು ತಮ್ಮ ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಸಭೆಯ ಗಮನ ಸೆಳೆಯಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಕೆಲವರ ನಡುವೆ ಕಿತ್ತಾಟ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿದ್ದವು. ಸಭೆ ಆರಂಭವಾಗಿ 2 ಗಂಟೆಯಾದರೂ ಕೂಡ ವಿಷಯವಾರು ಚರ್ಚೆ ನಡೆಯಲಿಲ್ಲ. ನಂತರ ಮಾಜಿ ಅಧ್ಯಕ್ಷ ಮೋಹನ್ ಅವರು ನಮ್ಮ ವಾರ್ಡಿನಲ್ಲಿ ಕೂಡ ಸಮಸ್ಯೆ ಇದೆ. ನನ್ನ ಸಮಸ್ಯೆಯನ್ನು ಆಲಿಸಿ ಎಂದು ಎದ್ದು ನಿಂತು ಮಾತನಾಡಲು ಮುಂದಾದರು. ಈ ಸಂದರ್ಭದಲ್ಲಿ ಶಾಸಕರು ನೀವು ಕೂಡ ಅಧ್ಯಕ್ಷರಾಗಿ ಕೆಲಸ ಮಾಡಿದ್ದೀರಾ, ವಿಷಯವಾರು ಚರ್ಚೆ ಮಾಡೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.
ಸಭೆಯ ಮುಂದೆ ಕೈ ಕಟ್ಟಿ ನಿಂತ ಅಧಿಕಾರಿಗಳು
ಫುತ್‌ಪಾತ್ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಂತಹ 20ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯ ಮುಂದೆ ಕೈಕಟ್ಟಿ ನಿಂತುಕೊಂಡರು. ಇಷ್ಟು ಜನ ಕಾರ್ಯಾಚರಣೆಗೆ ಭಾಗವಹಿಸಿದ್ದರು ಎಂಬುದನ್ನ ನೋಡಿ ಸಭೆಯಲ್ಲಿದ್ದಂತಹ ಅಧ್ಯಕ್ಷರು, ಶಾಸಕರು ಮತ್ತು ಸದಸ್ಯರು ಆಶ್ಚರ್ಯ ಚಕಿತರಾದರು. ನಂತರ ನೀಲಕಂಠ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸದಸ್ಯರು ಏಕೆ ಮಹಿಳೆಯ ಮನೆಯ ಮೇಲೆ ಈ ರೀತಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ನಂತರ ನೀಲಕಂಠ ಅವರು ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದಂತೆ ನಾವು ಸ್ವಚ್ಛತಾ ಕಾರ್ಯ ಮಾಡಲು ಮುಂದಾದೆವು. ನಾವು ತೆರವು ಕಾರ್ಯಾಚರಣೆ ಮಾಡಿದ್ದೇವೆ ಹೊರತು ಬೇರೆ ಯಾವ ಕೆಲಸವನ್ನು ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.