ದಾಂಡೇಲಿ: ದೇಶದಲ್ಲಿ ಸ್ವಚ್ಛತೆಗೆ ಮಹತ್ವ ನೀಡಲಾಗುತ್ತಿದೆ. ಆದರೆ, ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ಅಪಾರ ಪ್ಲಾಸ್ಟಿಕ್ ಕಸ ಕಂಡು ಬರುತ್ತಿರುವುದು ಹೇಸಿಗೆ ಹುಟ್ಟಿಸುತ್ತಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜೀವ ವೈವಿಧ್ಯ ಮಂಡಳಿಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಚರಂಡಿಗಳ ಕೊಳಚೆ ಕಾಳಿ ನದಿ ಸೇರುತ್ತಿರುವುದನ್ನು ತಡೆಯಬೇಕು. ಘನ ತ್ಯಾಜ್ಯ ನಿರ್ವಹಣೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ, ಕಾರವಾರದ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನ ಆಧಿಕಾರಿಗಳು ಕಾಳಿ ನದಿ ನೀರು ಬಳಸುವ ಪ್ರಮಾಣವನ್ನು ಕಡಿಮೆ ಮಾಡಬೇಕು. ನಗರದಲ್ಲಿ ವಾಯು ಮಾಲಿನ್ಯ ಆಗದಂತೆ ಮತ್ತು ಕಾರ್ಖಾನೆಯ ಹೊಗೆಯಿಂದ ಹೆಚ್ಚಿನ ವಾಸನೆ ಬರದಂತೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸೂಚಿಸಿದರು.
ಮುಂಬರುವ ದಿನಗಳಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮತ್ತು ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮತ್ತು ಸ್ಥಳೀಯ ಜೀವ ವೈವಿಧ್ಯ ಮಂಡಳಿಯ ಸದಸ್ಯರ ಸಭೆ ಕರೆಯಲಾಗುವುದು. ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಸಭೆ ಏರ್ಪಡಿಸಿ ದಾಂಡೇಲಿ ಸುತ್ತಮುತ್ತಲಿನ ಜೀವ ವೈವಿಧ್ಯ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ಕಾಗದ ಕಾರ್ಖಾನೆಯ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ ಮಾತನಾಡಿ, ಕಾರ್ಖಾನೆ ವತಿಯಿಂದ ಮಂಡಳಿಯ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ನೂತನ ತಾಂತ್ರಿಕ ನವೀಕರಣದ ನಿರ್ದೇಶನಗಳನ್ನು ಪಾಲಿಸುವುದಾಗಿ ತಿಳಿಸಿದರು.
ನಗರಸಭೆ ಪ್ರಭಾರಿ ಪೌರಾಯುಕ್ತ ಶೈಲೇಶ ಪರಮಾನಂದ, ಅಧ್ಯಕ್ಷೆ ಸರಸ್ವತಿ ರಜಪುತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಕಾರವಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಇಲಾಖೆಯ ಗಣಪತಿ ಹೆಗಡೆ, ಸರಸ್ವತಿ ರಜಪುತ, ಸಂಜಯ ನಂದ್ಯಾಳಕರ ಉಪಸ್ಥಿತರಿದ್ದರು.
ಜೀವ ವೈವಿಧ್ಯ ಮಂಡಳಿಯ ಸದಸ್ಯರಾದ ಯು.ಎಸ್. ಪಾಟೀಲ, ಯಾಸ್ಮಿನ್ ಕಿತ್ತೂರ, ಅನಿಲ ನಾಯ್ಕರ, ವೆಂಕಟರಮಣಮ್ಮ, ನಗರಸಭಾ ಸದಸ್ಯರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ಬೆಳೆ ಹಾನಿ ಪರಿಹಾರ ಹೆಚ್ಚಿಸಲು ಪ್ರಯತ್ನ: ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ವಾಸಿಸುವವರ ಬೆಳೆ ಹಾನಿ ಪರಿಹಾರ ಹೆಚ್ಚಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಜೀವ ವೈವಿಧ್ಯ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ಗುರುವಾರ ಜೊಯಿಡಾದ ತಾಪಂ ಸಭಾ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಇಲ್ಲಿನ ಜನರು ಅರಣ್ಯದಲ್ಲಿ ಬದುಕುವ ಜತೆ ಇಲ್ಲಿನ ಜೀವವೈವಿಧ್ಯತೆ ರಕ್ಷಣೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಸಾವಯವ ಕೃಷಿ ಪದ್ಧತಿ ಹೆಚ್ಚು ಪ್ರಚಲಿತದಲ್ಲಿದ್ದು, ಇದಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುಕೂಲ ಒದಗಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು.
ತಾಪಂ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಉಪಾಧ್ಯಕ್ಷ ವಿಜಯ ಪಂಡಿತ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ತಾ.ಪಂ. ಸದಸ್ಯ ಶರದ ಗುರ್ಜರ, ಅಲಕಾಂಜಾ ಮಂಥೆರೊ, ಕುಣಬಿ ಸಮಾಜ ಅಧ್ಯಕ್ಷ ಜಯಾನಂದ ಡೇರೇಕರ, ವಾಣಿ ಪೈ ಮುಂತಾದವರು ಉಪಸ್ಥಿತರಿದ್ದರು.
ನಿಯಮ ಉಲ್ಲಂಘನೆ, ವಿಶೇಷ ಚರ್ಚೆ: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ, ರಾಮನಗರದಲ್ಲಿ ಕಾಳಿ ನಿರಾಶ್ರಿತರಿಗೆ ನೀಡಿದ ಕಂದಾಯ ಜಮೀನಿನಲ್ಲಿ ಕಲ್ಲುಗಣಿಗಾರಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಅರಣ್ಯ ನಾಶದ ಬಗ್ಗೆ ರವಿ ರೇಡ್ಕರ್ ಮತ್ತು ರಾಮನಗರ ಅಕ್ರಮ ಕಲ್ಲುಗಣಿಗಾರಿಕೆ ಬಗ್ಗೆ ಶರದ ಗುರ್ಜರ್ ಲಿಖಿತವಾಗಿ ಮನವಿ ಸಲ್ಲಿಸಿದರು.