ಜಿಲ್ಲೆ

ನಗರ ಠಾಣೆಗೆ ಜೀಪ್ ಹಸ್ತಾಂತರ

ಚನ್ನರಾಯಪಟ್ಟಣ: ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ. ಇಲಾಖೆಯ ಮನವಿ ಮೇರೆಗೆ ಶ್ರೀನಿವಾಸಪುರ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ನಗರ ಠಾಣೆಗೆ ಜೀಪ್ ಕೊಡುಗೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಹಮ್ಮಕೊಂಡಿದ್ದ ಜೀಪ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10-12 ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಆಶ್ರಯಿಸಿ ಪೊಲೀಸರು ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಗೃಹ ಸಚಿವರು ಆಯಾ ಸರ್ಕಲ್ ಇನ್‌ಸ್ಪೆಕ್ಟರ್ ವ್ಯಾಪ್ತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಹೊಸ ವಾಹನ ಪಡೆಯುವಂತೆ ಇಲಾಖೆಗೆ ಸೂಚಿಸಿದ್ದರು. ಅಲ್ಲದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರ ಮನವಿ ಮೇರೆಗೆ ಕಾರ್ಖಾನೆ ವತಿಯಿಂದ ಜೀಪ್ ನೀಡಲಾಗುತ್ತಿದೆ ಎಂದರು.

ಪುರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದಿದ್ದು ಶೀಘ್ರ ಮತ್ತೊಂದು ಜೀಪ್ ಕೊಡಿಸಲಾಗುವುದು. ಅದನ್ನು ಡಿವೈಎಸ್‌ಪಿ ಅವರಿಗೆ ನೀಡಲಾಗುವುದು. ಶಾಂತಿ, ಸುವ್ಯವಸ್ಥೆಗಾಗಿ ಪಟ್ಟಣದಲ್ಲಿ 32 ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದು ಮತ್ತಷ್ಟು ಕ್ಯಾಮರಾಗಳಿಗೆ ಇಲಾಖೆ ಬೇಡಿಕೆ ಸಲ್ಲಿಸಿದೆ. ಈ ಕುರಿತಾಗಿ ಪುರಸಭೆಯಲ್ಲಿ ಅನುಮೋದನೆ ಪಡೆದಿದ್ದು, ಶೀಘ್ರ ಅಳವಡಿಕೆಯೊಂದಿಗೆ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ವೆಂಕಟೇಶ್ ನಾಯ್ಡು ಮಾತನಾಡಿ, ಶಾಸಕರು ವಿವಿಧ ಸಂಪನ್ಮೂಲಗಳಿಂದ ಪೊಲೀಸ್ ಇಲಾಖೆಗೆ ಸುಸಜ್ಜಿತ ವಾಹನ, ಸಿಸಿ ಕ್ಯಾಮರಾ ಕೊಡಿಸಿದ್ದಾರೆ. ಮುಂದೆಯೂ ಅವರ ಸಹಕಾರ ಇಲಾಖೆಗೆ ಇರಲಿ ಎಂದರು.

ಡಿವೈಎಸ್‌ಪಿಗಳಾದ ಎನ್.ಕುಮಾರ್, ಟಿ.ಆರ್.ಪಾಲಾಕ್ಷ, ಇನ್‌ಸ್ಪೆಕ್ಟರ್ ರಘುಪತಿ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ನಿರ್ದೇಶಕರಾದ ಮಂಜುನಾಥ್, ರವೀಶ್, ಯೋಗಾನಂದ್, ಭಾರತಿ ಶಿವಣ್ಣ, ವಳಂಬಗೆ ನಾರಾಯಣ್, ಹೊನ್ನಶೆಟ್ಟಿಹಳ್ಳಿ ರವಿಕುಮಾರ್ ಇದ್ದರು.