ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಭದ್ರಾವತಿ ತಾಲೂಕು ಶಾಖೆ ಪದಾಧಿಕಾರಿಗಳು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಚೇತನ್‌ಕುಮಾರ್, ಸಿ.ರವಿಪ್ರಸಾದ್, ಡಿ.ಎಸ್.ಹೇಮಂತಕುಮಾರ್ ಇತರರಿದ್ದರು. 
ಜಿಲ್ಲೆ

ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಿ

ಭದ್ರಾವತಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ತಾಲೂಕು ಶಾಖೆಯು ನಗರಸಭೆ ಎದುರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.

ಶುಕ್ರವಾರ ಬೆಳಗ್ಗೆಯಿಂದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗದೆ ಪ್ರತಿಭಟನೆ ಆರಂಭಿಸಿದರು. ಸರ್ಕಾರ ಇದುವರೆಗೂ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಮೀನಮೇಷ ಎಣಿಸುತ್ತಿದೆ. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಸವಲತ್ತುಗಳನ್ನು ಪೌರಸೇವಾ ನೌಕರರಿಗೂ ವಿಸ್ತರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ನೀರು ಸರಬರಾಜು ನೌಕರರನ್ನು ವಿಶೇಷ ನೇಮಕಾತಿಗೊಳಿಸಬೇಕು. ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಐಟಿ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ಸೂಪರ್‌ವೈಸರ್, ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ಜೂ.2ರಂದು ನೀರು ಸರಬರಾಜನ್ನೂ ಸ್ಥಗಿತಗೊಳಿಸಿ ಮುಷ್ಕರ ಮುಂದುವರಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚೇತನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ರವಿ ಪ್ರಸಾದ್, ಡಿ.ಎಸ್.ಹೇಮಂತಕುಮಾರ್, ಆರ್.ನರಸಿಂಹಮೂರ್ತಿ, ಪವನ್‌ಕುಮಾರ್, ಪ್ರಸಾದ್, ಎಂ.ಸುನೀತಾಕುಮಾರಿ, ಓಂಕಾರಪ್ಪ, ರಾಮಕೃಷ್ಣ, ರಾಜವೇಲು ಮತ್ತಿತರರಿದ್ದರು.